ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಪ್ರಕಟಿಸುತ್ತಿರುವ ನೂತನ ಇಂಗ್ಲೀಷ್ ನಿಯತಕಾಲಿಕೆಯ ಹಿಂದೆ ಸೌದಿ ಅರೇಬಿಯಾ ಸಂಜಾತ ಅಮೆರಿಕಾ ಪ್ರಜೆಯ ಕೈವಾಡವಿದೆ ಎಂದು ಅಮೆರಿಕಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಅಮೆರಿಕಾ ತೊರೆದಿರುವ ಸಮೀರ್ ಖಾನ್ ಎಂಬಾತ ಪ್ರಸಕ್ತ ಯೆಮನ್‌ನಲ್ಲಿ ವಾಸಿಸುತ್ತಿದ್ದಾನೆ. ಈತನೇ ಸಂಘಟನೆಯ ಹಲವು ಬ್ಲಾಗುಗಳನ್ನು ನಿರ್ವಹಿಸುತ್ತಿದ್ದಾನೆ ಎಂದು ಅಮೆರಿಕಾ ಅಧಿಕಾರಿಗಳು 'ಫಾಕ್ಸ್ ನ್ಯೂಸ್'ಗೆ ಹೇಳಿದ್ದಾರೆಂದು ಹೆರಾಲ್ಡ್ ಸನ್ ಪತ್ರಿಕೆ ವರದಿ ಮಾಡಿದೆ.
ಫೋರ್ಟ್ ಹುಡ್ ಹತ್ಯಾಕಾಂಡ ಮತ್ತು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ ಯತ್ನಿಸಿದ ಪ್ರಕರಣಗಳ ರೂವಾರಿ, ಅಮೆರಿಕಾ ಸಂಜಾತ ಇಸ್ಲಾಂ ಧರ್ಮಗುರು ಅನ್ವರ್ ಅಲ್ ಅವ್ಲಾಕಿ ಎಂಬಾತನಿಗೆ ಸಂಬಂಧಪಟ್ಟ ಯೆಮನ್‌ನ ಅರೇಬಿಯನ್ ಪೆನಿಸುವಲಾದಲ್ಲಿ ಅಲ್‌ಖೈದಾ ಇಂಟರ್ನೆಟ್ ನಿಯತಕಾಲಿಕ 'ಇನ್‌ಸ್ಪೈರ್'ನ್ನು ಪೋಸ್ಟ್ ಮಾಡಲಾಗಿತ್ತು.
ಅಲ್‌ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಬರವಣಿಗೆಗಳನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಪ್ರಕಟಿಸುವುದು ಮತ್ತು ವೀಡಿಯೋಗಳನ್ನು ಪ್ರಕಟಿಸುತ್ತಿರುವ ಕಾರ್ಯದಲ್ಲಿ ಖಾನ್ ಕಳೆದ ಹಲವು ವರ್ಷಗಳಿಂದ ನಿರತನಾಗಿರುವುದು ಅಮೆರಿಕಾ ಬೇಹುಗಾರಿಕಾ ಅಧಿಕಾರಿಗಳಿಗೆ ಗಮನಕ್ಕೆ ಬಂದಿತ್ತು ಎಂದು ಮೂಲಗಳು ಹೇಳಿವೆ.
ಅಮೆರಿಕಾ ವಿರೋಧಿ ಬ್ಲಾಗ್ ಆಗಿರುವ ಇನ್‌ಸ್ಪೈರ್‌ನಲ್ಲಿ 'ನಿಮ್ಮ ತಾಯಿಯ ಅಡುಗೆ ಕೋಣೆಯಲ್ಲಿ ಬಾಂಬು ತಯಾರಿಸುವುದು ಹೇಗೆ?' ಎಂಬ ರೀತಿಯ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ.