ಹೆಡ್ಲಿ ಮಾಹಿತಿಯನ್ನು ಪಾಕ್ ಕಡೆಗಣಿಸುವಂತಿಲ್ಲ: ಭಾರತದ ಎಚ್ಚರಿಕೆ
ಅಫ್ಘಾನಿಸ್ತಾನ, ಬುಧವಾರ, 21 ಜುಲೈ 2010( 12:52 IST )
ಅಮೆರಿಕದ ವಶದಲ್ಲಿರುವ ಡೇವಿಡ್ ಹೆಡ್ಲಿ ಎಫ್‌ಬಿಐ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವ ವಿಷಯವನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಬೇಕು ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಆತ ಹೊರಹಾಕಿರುವುದು ಸಾರ್ವಜನಿಕ ವಿಷಯ ಹಾಗಾಗಿ ಅದನ್ನು ಮೂಲೆಗುಂಪು ಮಾಡಬಾರದು ಎಂದು ಕೂಡ ಎಚ್ಚರಿಸಿದೆ.
ಮುಂಬೈ ದಾಳಿ ಕುರಿತಂತೆ ಹೆಡ್ಲಿ ಎಫ್‌ಬಿಐ ಅಧಿಕಾರಿಗಳ ಮುಂದೆ ಬಯಲು ಮಾಡಿರುವ ವಿಷಯವನ್ನು ಪಾಕಿಸ್ತಾನ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಅಲ್ಲದೇ ಅದು ಭಾರತದ ಆಶಯ ಕೂಡ ಹೌದು ಎಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕಾಬೂಲ್‌ನ ಅಂತಾರಾಷ್ಟ್ರೀಯ ಶೃಂಗಸಭೆಯಿಂದ ವಾಪಸಾಗುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಹೆಡ್ಲಿ ಬಾಯ್ಬಿಟ್ಟಿರುವುದು ಸಾರ್ವಜನಿಕವಾದ ವಿಷಯ, ಹಾಗಾಗಿ ಆ ವಿಷಯವನ್ನು ಮೂಲೆಗುಂಪು ಮಾಡಬಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಡೇವಿಡ್ ಹೆಡ್ಲಿ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ. ಎಫ್‌ಬಿಐ ವಶದಲ್ಲಿರುವ ಹೆಡ್ಲಿ ಮುಂಬೈ ದಾಳಿ ಕುರಿತಂತೆ ಲಷ್ಕರ್ ಇ ತೊಯ್ಬಾ ಹಾಗೂ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಏನೆಲ್ಲಾ ಸಂಚು ಹೂಡಿವೆ ಎಂಬುದನ್ನು ಭಾರತದ ಎನ್‌ಐಎ ಅಧಿಕಾರಿಗಳು ತನಿಖೆಗೆ ಒಳಪಡಿಸಿದಾಗಲೂ ಮಾಹಿತಿ ಬಹಿರಂಗಪಡಿಸಿದ್ದ.
ಮುಂಬೈ ಭಯೋತ್ಪಾದನಾ ದಾಳಿಯ ಆರಂಭದಿಂದ ಅಂತ್ಯದವರೆಗೂ ಪಾಕಿಸ್ತಾನದ ಐಎಸ್ಐ ವ್ಯವಸ್ಥಿತವಾದ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೆಡ್ಲಿ ವಿವರಿಸಿದ್ದ. ಈ ಎಲ್ಲಾ ವಿವರವನ್ನು ಭಾರತ ಪಾಕಿಸ್ತಾನಕ್ಕೆ ದಾಖಲೆಗಳನ್ನು ನೀಡಿರುವುದಾಗಿಯೂ ಕೃಷ್ಣ ಹೇಳಿದರು.
ಮುಂಬೈ ದಾಳಿಯ ಹಿಂದೆ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳು ಮತ್ತು ಐಎಸ್ಐ ಶಾಮೀಲಾಗಿದ್ದಾರೆ ಎಂಬ ಡೇವಿಡ್ ಹೆಡ್ಲಿಯ ಆರೋಪವನ್ನು ಪಾಕಿಸ್ತಾನ ಸಾರಸಗಟಾಗಿ ತಳ್ಳಿಹಾಕಿದ ನಡುವೆಯೇ ಕೃಷ್ಣ ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.