ದೂರ ಪ್ರಯಾಣದ ವಿಮಾನಗಳಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಕೆ ಗಗನಸಖಿ ಕೆಲಸ ಬಿಟ್ಟು ಪ್ರಯಾಣಿಕರ ಹಣ, ಕ್ರೆಡಿಟ್ ಕಾರ್ಡ್, ಚಿನ್ನಗಳನ್ನು ಕದಿಯುವ ಕೆಲಸಕ್ಕೆ ಇಳಿದು ಸಿಕ್ಕಿಬಿದ್ದಿರುವಾಕೆ ಇದೀಗ ಸುಮಾರು ಹತ್ತು ವರ್ಷಗಳ ಕಾಲ ಜೈಲುವಾಸ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ನಿದ್ದೆ ಮಾಡಿದ ಸಂದರ್ಭದಲ್ಲಿ ಹಣ, ಚಿನ್ನ ಕದಿಯುತ್ತಿದ್ದ 47ರ ಹರೆಯದ ಏರ್ ಫ್ರಾನ್ಸ್‌ನ ಕಳ್ಳಿ ಗಗನಸಖಿ ವಿರುದ್ಧ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಆಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಈ ಗಗನಸಖಿ ಪ್ರಯಾಣಿಕರ ಪರ್ಸ್, ಹ್ಯಾಂಡ್‌ಬ್ಯಾಗ್‌ನಲ್ಲಿದ್ದ ಹಣ,ಕ್ರೆಡಿಟ್ ಕಾರ್ಡ್, ಚಿನ್ನವನ್ನು ದೋಚುತ್ತಿದ್ದಳು.ಒಂದೇ ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ 3,700ಪೌಂಡ್ಸ್ ಲಪಟಾಯಿಸಿದ್ದಳು ಎಂದು ಡೈಲಿ ಮೇಲ್ ವರದಿ ತಿಳಿಸಿದೆ. ಕಳ್ಳಿ ಗಗನಸಖಿ ಹಣ, ಚಿನ್ನ ಮಾತ್ರವಲ್ಲ, ಪ್ರಯಾಣಿಕರಿಗೆ ವಿತರಿಸುವ ಊಟ, ಆಲ್ಕೋಹಾಲ್ ಅನ್ನು ಕೂಡ ಕದಿಯುತ್ತಿದ್ದಳಂತೆ. ಅಂತೂ ಈಗಾಗಲೇ ಸಾಕಷ್ಟು ಮಂದಿ ಪ್ರಯಾಣಿಕರ ಹಣವನ್ನು ಲೂಟಿ ಮಾಡಿದ್ದಳು.
ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಪ್ಯಾರಿಸ್ ವಿಮಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೂಸಿ ಆರ್ ಎಂಬ ಗಗನಸಖಿಯನ್ನು ಟೋಕಿಯೋದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ತನ್ನ ಕಳ್ಳತನದ ಆರೋಪವನ್ನು ಒಪ್ಪಿಕೊಂಡಿದ್ದಾಳೆ. ಒಟ್ಟು 26 ಕಳ್ಳತನದ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಆ ಬಗ್ಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫ್ರಾನ್ಸ್‌ನಿಂದ ದೂರ ಪ್ರಯಾಣದ ವಿಮಾನಗಳಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿರುವ ವೇಳೆಯಲ್ಲಿ ಲೂಸಿ ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳಿ ಗಗನಸಖಿ ಪ್ಯಾರಿಸ್ ಪೊಲೀಸರ ವಶದಲ್ಲಿದ್ದು, ಈ ವಾರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.