ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಹಿಂದೂ ಕುಟುಂಬವೊಂದರ ಏಳು ಸದಸ್ಯರನ್ನು ಅಪರಿಚಿತ ದುಷ್ಕರ್ಮಿಗಳು ಕೊಂದು ಹಾಕಿರುವ ಭೀಭತ್ಸ ಘಟನೆ ವರದಿಯಾಗಿದೆ.
ಬಲೂಚಿಸ್ತಾನದ ಬುಡಕಟ್ಟು ಪ್ರದೇಶ ಸುಹ್ಬಾತ್ಪುರ್ ಉಪ ವಿಭಾಗದ ಜಾಫರಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಐವರು ಮಕ್ಕಳು, ದಂಪತಿ ಸೇರಿದಂತೆ ಏಳು ಮಂದಿಯನ್ನು ಗುಂಡಿಕ್ಕಿ ಕೊಂದು ಹಾಕಲಾಗಿದೆ.
ಇದು ಬುಗ್ತಿ ಎಂಬ ಬುಡಕಟ್ಟು ಜನಾಂಗದ ಒಳ ಜಗಳ ಎಂದೂ ಹೇಳಲಾಗುತ್ತಿದೆ. ಆದರೂ ಇದುವರೆಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಏಳು ಮಂದಿ ಮಂಗಳವಾರ ಎರಡು ಗುಂಪುಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ. ಹತ್ತು ಮಂದಿ ತಮ್ಮ ಮನೆಯಲ್ಲಿ ಮಲಗಿದ್ದ ಹೊತ್ತಿನಲ್ಲಿ ಹೊರಗಿನಿಂದ ಬಂದವರು ಗುಂಡಿನ ದಾಳಿ ನಡೆಸಿದ್ದರು ಎಂದು ಇಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಜಾವೇದ್ ಇಕ್ಬಾಲ್ ತಿಳಿಸಿದ್ದಾರೆ.
ಶಂಕರ್, ಅವರ ಪತ್ನಿ ಮತ್ತು ಐವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರು ಸಿಂಧ್ ಪ್ರಾಂತ್ಯ ಬಕಾಸ್ಪುರ್ ನಗರದ ನಿವಾಸಿಗಳು.
ಘಟನೆ ನಡೆಯುತ್ತಿದ್ದಂತೆ ಹಿಂದೂಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಸರಕಾರ ರಕ್ಷಣೆ ನೀಡುತ್ತಿಲ್ಲ ಎಂದು ಶವಗಳನ್ನು ರಸ್ತೆಯಲ್ಲಿಟ್ಟು ಪಕ್ಕದ ಹೆದ್ದಾರಿಯನ್ನು ಬಂದ್ ಮಾಡಿ ಅವರು ಪ್ರತಿಭಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.