ಚೀನಾದ ವಾಯುವ್ಯ ಪ್ರಾಂತ್ಯದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಇದುವರೆಗೆ ಕನಿಷ್ಠ 41 ಮಂದಿ ಸಾವನ್ನಪ್ಪಿದ್ದಾರೆ ಮತ್ತು 107 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಳೆದ ಶುಕ್ರವಾರದ ನಂತರ ದೇಶದ ದಕ್ಷಿಣ ಭಾಗದಲ್ಲಿನ ಶಾನ್‌ಕ್ಸಿ ಪ್ರಾಂತ್ಯದಲ್ಲಿನ ಮೂರು ನಗರಗಳ 22 ಕೌಂಟಿಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮಂಗಳವಾರ ಅಪರಾಹ್ನದ ಹೊತ್ತಿಗೆ ಮೂರು ನಗರಗಳ ವ್ಯಾಪ್ತಿಯಲ್ಲಿನ 16.6 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಸುಮಾರು 27,160 ಮನೆಗಳು ಧ್ವಂಸಗೊಂಡಿವೆ.
ಅಂಕಾಂಗ್ ನಗರ ಒಂದರಲ್ಲೇ ಭಾನುವಾರ ರಾತ್ರಿ ಸಂಭವಿಸಿದ ಎರಡು ಬೃಹತ್ ಭೂಕುಸಿತಗಳಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಮತ್ತು 35 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಭಾರೀ ಮಳೆ ಮತ್ತು ಪ್ರವಾಹದ ಕಾರಣದಿಂದಾಗಿ ಬಹುತೇಕ ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ದೂರವಾಣಿ ಮತ್ತು ವಿದ್ಯುತ್ ವ್ಯವಸ್ಥೆಗಳು ಕೂಡ ಸಂಪೂರ್ಣವಾಗಿ ನೆಲ ಕಚ್ಚಿವೆ.