ಉತ್ತರ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಗುಂಡಿನ ಘರ್ಷಣೆ ನಡೆಯುತ್ತಿದ್ದ ವೇಳೆ ತಾಲಿಬಾನ್ ನಿಕಟವರ್ತಿ ಬಂಡುಕೋರರು ಆರು ಮಂದಿ ಅಫ್ಘಾನ್ ಪೊಲೀಸರ ಶಿರಚ್ಛೇದನ ನಡೆಸಿರುವ ದಾರುಣ ಘಟನೆ ನಡೆದಿರುವುದಾಗಿ ನ್ಯಾಟೋ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇಲ್ಲಿನ ಬಾಗ್ಲಾನ್ ಪ್ರಾಂತ್ಯದಲ್ಲಿ ಈ ದಾರುಣ ಘಟನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಉಗ್ರರು ಹೆಚ್ಚಿನ ರೀತಿಯಲ್ಲಿ ಪ್ರಾಬಲ್ಯ ಹೊಂದಿರುವುದಾಗಿ ನ್ಯಾಟೋದ ಅಂತಾರಾಷ್ಟ್ರೀಯ ಭದ್ರತಾ ಸಹಾಯಕ ಪಡೆ ವಕ್ತಾರರು ಹೇಳಿದ್ದಾರೆ.
ಡಾಹಾನಾ ಯೆ ಘೋರಿ ಪ್ರದೇಶದಲ್ಲಿನ ಶಾಲೆ, ಕ್ಲಿನಿಕ್ ಮತ್ತು ಜಿಲ್ಲಾ ಗವರ್ನರ್ ಕಟ್ಟಡದ ಮೇಲೆ ಉಗ್ರರು ನಡೆಸುತ್ತಿರುವ ದಾಳಿಯನ್ನು ತಡೆಗಟ್ಟಲು ಪೊಲೀಸರು ಇತ್ತೀಚೆಗೆ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಹಲವಾರು ಉಗ್ರರು ಕೂಡ ಬಲಿಯಾಗಿದ್ದರು ಎಂದು ವಿವರಿಸಿದ್ದಾರೆ.
ಆದರೆ ಮಂಗಳವಾರ ನಡೆದ ಘರ್ಷಣೆ ಸಂದರ್ಭದಲ್ಲಿ ಉಗ್ರರು ಪೊಲೀಸ್ ಅಧಿಕಾರಿಗಳನ್ನು ಕೊಂದು, ಅವರ ತಲೆಗಳನ್ನು ಕತ್ತರಿಸಿರುವುದಾಗಿ ತಿಳಿಸಿದರು. ಈ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಐಎಸ್ಎಎಫ್ ಹೇಳಿದೆ. ಘಟನೆಯಲ್ಲಿ ಆರು ಮಂದಿ ಪೊಲೀಸರ ಶಿರಚ್ಛೇದ ಮಾಡಿರುವುದನ್ನು ಪ್ರಾಂತ್ಯೀಯ ಗವರ್ನರ್ ಅಬ್ದುಲ್ ಮಜೀದ್ ಖಚಿತಪಡಿಸಿದ್ದಾರೆ. ಆದರೆ ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದ್ದಾರೆ.