ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜಕೀಯ ಮುಖಂಡರು ಮಾತಿಗಿಳಿದರೂ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಂಡು ಮುಂಜಾಗ್ರತೆ ತೆಗೆದುಕೊಳ್ಳುವುದು ಅಷ್ಟರಲ್ಲೇ ಇದೆ. ಇದೀಗ ಮತ್ತೊಂದು ಎಚ್ಚರಿಕೆ ಹೊರಗೆ ಬಂದಿದೆ.
ಹವಾಮಾನ ತಜ್ಞರ ಪ್ರಕಾರ ಈ ವರ್ಷ ವಿಶ್ವವು ಭಾರೀ ತಾಪಮಾನವನ್ನು ಎದುರಿಸುತ್ತಿದೆ. 1880ರ ನಂತರ ವಾತಾವರಣ ಇಷ್ಟೊಂದು ಪ್ರಮಾಣದಲ್ಲಿ ಬಿಸಿಯನ್ನು ಕಾಣುತ್ತಿರುವುದು ಇದೇ ವರ್ಷ ಎಂಬ ದಾಖಲೆ ವರ್ಷಾಂತ್ಯದಲ್ಲಿ ಸೃಷ್ಟಿಯಾದರೂ ಅಚ್ಚರಿಯಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವರದಿಗಳ ಪ್ರಕಾರ 2010ರ ಮೊದಲ ಆರು ತಿಂಗಳುಗಳಲ್ಲಿ ನಾಲ್ಕು ತಿಂಗಳು ಅಂದರೆ ಜೂನ್ ಕೂಡ ಸೇರಿದಂತೆ ಸತತ ನಾಲ್ಕು ತಿಂಗಳು ದಾಖಲೆಯ ತಾಪಮಾನವನ್ನು ಕಂಡಿವೆ. ಕಳೆದ ತಿಂಗಳಂತೂ ಅತೀ ಹೆಚ್ಚಿನ ವಾತಾವರಣ ಬಿಸಿಯನ್ನು ದಾಖಲಿಸಿದೆ. ಇದು ಈ ವರ್ಷದ ಮುಂದಿನ ತಿಂಗಳುಗಳಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಅಮೆರಿಕಾ ಎನ್ಒಎಎ ಸಂಸ್ಥೆ ಹೇಳಿದೆ.
1998ರ ತಿಂಗಳುಗಳ ದಾಖಲೆಯನ್ನು ಈಗಾಗಲೇ 2010 ಮೀರಿ ನಿಂತಿದೆ ಎಂದು ಬ್ರಿಟನ್‌ನ 'ಟೆಲಿಗ್ರಾಫ್' ಪತ್ರಿಕೆ ವರದಿ ಮಾಡಿದೆ.
ಜನವರಿಯಿಂದ ಜೂನ್ ತಿಂಗಳುಗಳ ಅವಧಿಯಲ್ಲಿ ಒಟ್ಟಾರೆ ಭೂಮಿ ಮತ್ತು ಸಾಗರದ ಮೇಲ್ಮೈ ತಾಪಮಾಣವು 1880ರ ನಂತರ ದಾಖಲಾಗಿರುವ ಗರಿಷ್ಠ ತಾಪಮಾನ ಎಂದು ಎನ್ಒಎಎ ತಿಳಿಸಿದೆ.
2010ರ ಮೊದಲ ಆರು ತಿಂಗಳುಗಳಲ್ಲಿ 57.5 ಡಿಗ್ರಿ ಫ್ಯಾರನ್ಹೀಟ್ ತಾಪಮಾನ ದಾಖಲಾಗಿದೆ. ಇದು 20ನೇ ಶತಮಾನದ ಜನವರಿ ತಿಂಗಳಿಂದ ಜೂನ್ ಅವಧಿಯಲ್ಲಿನ ಸರಾಸರಿಗಿಂತ ಹೆಚ್ಚು ಎಂದು ಅಂಕಿ-ಅಂಶಗಳು ವಿವರಣೆ ನೀಡಿವೆ.