2004ರಲ್ಲಿ ಉಲ್ಫಾ ಉಗ್ರಗಾಮಿ ಸಂಘಟನೆಗೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಮಾಜಿ ಸಚಿವ ಲುತ್‌ಫುಜ್ಜಾಮನ್ ಬಾಬಾರ್ ವಿರುದ್ಧ ದೋಷಾರೋಪ ಹೊರಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.
ಖಾಲಿದಾ ಜಿಯಾ ಮೈತ್ರಿಕೂಟದ ಬಿಎನ್‌ಪಿ ಆಡಳಿತಾವಧಿಯಲ್ಲಿ ಬಾಬಾರ್ ಗೃಹಸಚಿವರಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರ ವಿರುದ್ಧ ಆರೋಪ ಹೊರಿಸಲು ತಯಾರಿ ನಡೆಸಿರುವುದಾಗಿ ಬಿಎಸ್ಎಸ್ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
ತನಿಖೆಯಲ್ಲಿ ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಶಾಮೀಲಾಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಭಾರೀ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದಲ್ಲಿ ಬಾಬಾರ್ ಶಾಮೀಲಾತಿ ಬಗ್ಗೆಯೂ ಮಾಹಿತಿ ಲಭಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ ಎಂದು ವರದಿ ಹೇಳಿದೆ.
ಮಾಜಿ ಗೃಹ ಸಚಿವ ಓಮರ್ ಫಾರುಕ್ ಕೂಡ ಹಲವು ಶಂಕಿತರಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಅವರನ್ನೂ ಕೂಡ ತನಿಖೆಗೆ ಒಳಪಡಿಸಲಾಗಿತ್ತು. ಬಾಬಾರ್ ಈಗ ಜೈಲಿನಲ್ಲಿದ್ದು, ಅವರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳು ದಾಖಲಾಗಿವೆ.