ಜೋಹಾನ್ಸ್ಬರ್ಗ್, ಗುರುವಾರ, 22 ಜುಲೈ 2010( 18:09 IST )
ನೆಲ್ಸನ್ ಮಂಡೇಲಾ ಅವರ 92ನೇ ಹುಟ್ಟುಹಬ್ಬದ ಔತಣಕೂಟದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅವರ ಮೊಮ್ಮಕ್ಕಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ತಿಳಿಸಿದ್ದಾರೆ.
ಜುಲೈ 18ರ ಭಾನುವಾರ ನಡೆದಿದ್ದ ಈ ಪಾರ್ಟಿ ಸಂದರ್ಭದಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.
ಮಂಡೇಲಾ ಅವರ ಮೊಮ್ಮಕ್ಕಳು ಹುಟ್ಟುಹಬ್ಬದ ಔತಣಕೂಟ ಮುಗಿಸಿಕೊಂಡು ಜೋಹಾನ್ಸ್‌ಬರ್ಗ್‌ನಲ್ಲಿನ ತಮ್ಮ ಮನೆಗೆ ವಾಪಸ್ ಬರುತ್ತಿರುವ ಸಂದರ್ಭದಲ್ಲಿ ದಾಳಿ ನಡೆದಿತ್ತು ಎಂದು ಪೊಲೀಸ್ ವಕ್ತಾರ ಗೋವಿಂದಸಾಮಿ ಮಾರಿಮುತ್ತು ತಿಳಿಸಿದ್ದಾರೆ.
ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮಂಡೇಲಾ ಪುತ್ರಿ ಜಿಂದಜೈ ಅವರ ಮನೆಯ ಗೇಟಿನ ಒಳಗೆ ಕಾರಿನಲ್ಲಿ ಬಂದು ಗುಂಡು ಹಾರಿಸಿದ್ದರು. ಆಗ ಕುಟುಂಬದ ಡ್ರೈವರ್ ಕೂಡ ಮರು ದಾಳಿ ನಡೆಸಿದ್ದ. ತಕ್ಷಣವೇ ದಾಳಿಕೋರರು ಪರಾರಿಯಾಗಿದ್ದರು.
ಘಟನೆಯನ್ನು ಇದುವರೆಗೆ ಪೊಲೀಸರು ಯಾಕೆ ಬಹಿರಂಗಪಡಿಸಿಲ್ಲ ಎನ್ನುವುದು ಖಚಿತವಾಗಿಲ್ಲ. ಶಸ್ತ್ರಸಜ್ಜಿತವಾಗಿ ಕಾರಿನಲ್ಲಿ ಬಂದು ಅಪಹರಿಸುವುದು ದಕ್ಷಿಣ ಆಫ್ರಿಕಾದಲ್ಲಿ ಸಾಮಾನ್ಯಾವಾಗಿರುವ ಹಿನ್ನೆಲೆಯಲ್ಲಿ, ಘಟನೆ ಮಹತ್ವ ಪಡೆದುಕೊಂಡಿದೆ.