ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಡೇವಿಡ್ ಹೆಡ್ಲಿ ನೀಡಿದ್ದ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳು ಬಹಿರಂಗಪಡಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕಾ, ಜವಾಬ್ದಾರಿ ಅರಿತುಕೊಂಡು ಮುಂದುವರಿಯುವಂತೆ ಸಲಹೆ ನೀಡಿದೆ.
ಪಾಕಿಸ್ತಾನದ ನೌಕಾಪಡೆ ಮತ್ತು ಐಎಸ್ಐಗಳು ಮುಂಬೈ ದಾಳಿಯಲ್ಲಿ ಸಕ್ರಿಯ ಪಾತ್ರವಹಿಸಿರುವುದು ಸೇರಿದಂತೆ ಹಲವು ವಿಚಾರಗಳನ್ನು ಇತ್ತೀಚೆಗಷ್ಟೇ ಅಮೆರಿಕಾಕ್ಕೆ ತೆರಳಿದ್ದ ಭಾರತೀಯ ತನಿಖಾ ದಳಗಳಿಗೆ ಹೆಡ್ಲಿ ತಿಳಿಸಿದ್ದ. ಇದನ್ನು ಅಧಿಕಾರಿಗಳು ಒಂದೊಂದಾಗಿಯೇ ಬಹಿರಂಗಪಡಿಸುತ್ತಿದ್ದಾರೆ.
ಆದರೆ ಇದು ಅಮೆರಿಕಾ ಆಡಳಿತಕ್ಕೆ ತೀವ್ರ ಅಸಮಾಧಾನವಾಗಿದೆ. ಭಯೋತ್ಪಾದನೆ ನಿಗ್ರಹಕ್ಕೆ ಭಾರತದೊಂದಿಗೆ ಸಹಕಾರಕ್ಕೆ ಅಮೆರಿಕಾ ಒತ್ತು ನೀಡುತ್ತಿದೆ. ಈ ಸಂಬಂಧ ಎರಡೂ ರಾಷ್ಟ್ರಗಳು ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಅಮೆರಿಕಾ ವಕ್ತಾರ ಪಿ.ಜೆ. ಕ್ರೌಲಿ ತಿಳಿಸಿದ್ದಾರೆ.
ಮುಂಬೈ ದಾಳಿಯ ಬಗ್ಗೆ ಹೆಡ್ಲಿ ನೀಡಿರುವ ಮಾಹಿತಿಯನ್ನು ಭಾರತದ ಅಧಿಕಾರಿಗಳು ಮಾಧ್ಯಮಗಳಿಗೆ ಬಹಿರಂಗಪಡಿಸುತ್ತಿರುವ ಕುರಿತು ಕ್ರೌಲಿಯವರಲ್ಲಿ ಪ್ರಶ್ನಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ನಡುವಿನ ಸಹಕಾರ ಮಹತ್ವದ್ದು ಎಂದು ನಾನು ಒತ್ತಿ ಹೇಳುತ್ತಿದ್ದೇನೆ. ಇದು ಉಭಯ ರಾಷ್ಟ್ರಗಳಿಗೂ ಮಹತ್ವದ್ದಾಗಿದೆ. ಹಾಗಾಗಿ ಸಮಾನ ಜವಾಬ್ದಾರಿ ಎರಡೂ ರಾಷ್ಟ್ರಗಳ ಮೇಲಿವೆ ಎಂದು ಅವರು ಹೇಳಿದ್ದಾರೆ.
ಆದರೆ ಅಮೆರಿಕಾದ ಕಾನೂನು ವಿಭಾಗವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.