ಸ್ವೀಡನ್‌ನ 60ರ ಹರೆಯದ ಮಹಿಳೆಯೊಬ್ಬರು ಸ್ಟಾಕ್‌ಹೋಮ್‌ನ ಹೊರವಲಯದಲ್ಲಿ ತನ್ನ ತಾಯಿ, ಸಹೋದರಿ ಹಾಗೂ ಮಗನ ಜೊತೆ ವಾಸಿಸುತ್ತಿದ್ದಾರೆ. ಆದರೆ ಇದರಲ್ಲೇನೂ ವಿಶೇಷ ಎಂದು ಹುಬ್ಬೇರಿಸಬೇಡಿ, ಆಕೆ ಸುಮಾರು 191 ಬೆಕ್ಕುಗಳೊಂದಿಗೆ ಜೀವನ ಸಾಗಿಸುತ್ತಿರುವುದಾಗಿ ಅಫ್ಟೋನ್‌ಬ್ಲಾಡೆಟ್ ದೈನಿಕದ ವರದಿ ತಿಳಿಸಿದೆ.
ಆದರೆ ಈ ಬಗ್ಗೆ ಸ್ಟಾಕ್‌ಹೋಮ್ಸ್‌ನ ಸಮಾಜಸೇವಾ ಸಂಸ್ಥೆಯೊಂದು ಕ್ಯಾತೆ ತೆಗೆದಿದೆ. 191 ಬೆಕ್ಕುಗಳನ್ನು ಹೊಂದಿರುವ ಈ ಮನೆಯ ವಾತಾವರಣ ಭಯಹುಟ್ಟಿಸುವಂತಿದೆ. ರಾಶಿ,ರಾಶಿ ಸಂಖ್ಯೆಯಲ್ಲಿರುವ ಬೆಕ್ಕುಗಳು ಮನೆಯ ಟೇಬಲ್, ಮಹಡಿ, ಕಿಟಕಿ ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ. ಇದರಿಂದಾಗಿ ಮನುಷ್ಯರು ಮತ್ತು ಪ್ರಾಣಿಗಳಿಗೆ ಸೋಂಕು ತಗುಲಿದೆ ಎಂಬ ಆರೋಪ ಸಂಸ್ಥೆಯದ್ದು.
ಬೆಕ್ಕುಗಳ ಸಂಖ್ಯೆಯೇ ಅಧಿಕವಾಗಿರುವುದರಿಂದ ಮನೆಯಲ್ಲಿ ಶುದ್ದವಾದ ಗಾಳಿಯೇ ಇಲ್ಲದಂತಾಗಿದೆ ಎಂದು ಸ್ಟಾಕ್‌ಹೋಮ್ ಸಮಾಜಸೇವಾ ಸಂಸ್ಥೆಯ ಹಿರಿಯ ಸದಸ್ಯೆಯಾಗಿರುವ ಮಾರೈ ಲುಂಡಿನ್ ಪತ್ರಿಕೆಗೆ ತಿಳಿಸಿದ್ದಾರೆ.
ಹಲವು ಬೆಕ್ಕುಗಳು ಖಾಯಿಲೆಗೆ ಒಳಗಾಗಿವೆ. ಸುಮಾರು 173 ಬೆಕ್ಕುಗಳು ಮನೆಯ ಒಳಗೆ ಠಿಕಾಣಿ ಹೂಡಿವೆ. ಅದರಲ್ಲಿ 18 ಬೆಕ್ಕುಗಳು ಪ್ರಾಣಿಗಳ ಶೆಡ್‌ನಲ್ಲಿ ನೆಲೆಸಿವೆ. ಸ್ವೀಡನ್‌ನ ಕಾನೂನಿನನ್ವಯ ಒಂದು ಕುಟುಂಬ ಹೆಚ್ಚೆಂದರೆ ಒಂಬತ್ತು ಬೆಕ್ಕುಗಳನ್ನು ಸಾಕಬಹುದಾಗಿದೆ.
ಆದರೆ ಭಾರೀ ಸಂಖ್ಯೆಯಲ್ಲಿ ಬೆಕ್ಕುಗಳಿರುವ ಬಗ್ಗೆ ಮನೆಯವರಲ್ಲಿ ಉತ್ತಮವಾದ ಅಭಿಪ್ರಾಯವಿದೆ ಎಂದು ಸಮಾಜಸೇವಾ ಸಂಸ್ಥೆಯ ಪ್ರತಿನಿಧಿ ಕರೀನಾ ಬುರ್ಲಿನ್ ಹೇಳಿದ್ದಾರೆ. ಕೆಲವು ಜನರು ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ಅವುಗಳನ್ನು ತುಂಬಾ ಉತ್ತಮ ರೀತಿಯಲ್ಲಿ ಕಾಳಜಿ ವಹಿಸುವ ಇಚ್ಛೆ ಹೊಂದಿರುತ್ತಾರೆ. ಆದರೆ ನಮಗೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂಬುದು ಬುರ್ಲಿನ್ ನುಡಿ.
ಸ್ಟಾಕ್‌ಹೋಮ್‌ನಲ್ಲಿ ಬರೇ ಬೆಕ್ಕುಗಳೊಂದಿಗೆ ಮಾತ್ರವಲ್ಲ ಇಂತಹ ಕೆಲವು ಪ್ರಕರಣಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿರುವ ಬುರ್ಲೆನ್, 2007ರಲ್ಲಿ ಮಹಿಳೆಯೊಬ್ಬಳ ಒಂದೇ ಕೋಣೆಯಲ್ಲಿ ಸುಮಾರು 11 ಹಂಸಪಕ್ಷಿಗಳೊಂದಿಗೆ ವಾಸಿಸುತ್ತಿದ್ದರು. ಸೆಂಟ್ರಲ್ ಸ್ವೀಡನ್‌ನ ಗಾವ್ಲೆಯಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಮೂರು ಕೋಣೆಯಲ್ಲಿ 21 ನಾಯಿಗಳೊಂದಿಗೆ ವಾಸ್ತವ್ಯ ಹೂಡಿರುವುದಾಗಿಯೂ ಉದಾಹರಣೆ ನೀಡಿದರು.