ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ವಿಫಲ ಬಾಂಬ್ ಸ್ಫೋಟದ ಆರೋಪಿ ಫೈಸಲ್ ಶಾಹಜಾದ್, ನೂತನವಾಗಿ ಬಿಡುಗಡೆಗೊಂಡಿರುವ ವೀಡಿಯೋ ಚಿತ್ರಣವೊಂದರಲ್ಲಿ ಪಾಕಿಸ್ತಾನಿ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ಜೊತೆಗಿದ್ದು, ಕೈ ಕುಲುಕುತ್ತಿರುವ ಇಬ್ಬರೂ ಆತ್ಮೀಯವಾಗಿ ಬಿಗಿದಪ್ಪಿಕೊಂಡಿರುವ ದೃಶ್ಯ ದಾಖಲಾಗಿದೆ.
ಟೈಮ್ಸ್ ಸ್ಕ್ವೇರ್ ವಿಫಲ ಬಾಂಬ್ ಸ್ಫೋಟಿನ ಸಂಚಿನಲ್ಲಿ ಬಂಧಿತನಾಗಿರುವ ಪಾಕಿಸ್ತಾನಿ ಮೂಲದ ಅಮೆರಿಕ ಪ್ರಜೆ ಫೈಸಲ್, ತಾನು ಮೆಹ್ಸೂದ್ ಹಾಗೂ ಇನ್ನಿತರ ಉಗ್ರಗಾಮಿ ಸಂಘಟನೆಯ ಮುಖಂಡರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದ. ಆದರೆ ಆತ ಬಾಯ್ಬಿಟ್ಟಿರುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ನ್ಯೂಯಾರ್ಕ್ ಅಧಿಕಾರಿಗಳು ತಿಳಿಸಿದ್ದರು.
ಆದರೆ ಇದೀಗ ನೂತನ ವೀಡಿಯೋದಲ್ಲಿ ಶಾಹಜಾದ್ ತಾಲಿಬಾನ್ ಮುಖಂಡ ಮೆಹ್ಸೂದ್‌ನ ಕೈಕುಲುಕುತ್ತಿರುವ ದೃಶ್ಯ ಸ್ಪಷ್ಟವಾಗಿ ಸೆರೆಹಿಡಿಯಲಾಗಿದೆ. ಈ ವೀಡಿಯೋ ಸ್ಕೈ ನ್ಯೂಸ್ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಂಡಿದೆ. ಅಷ್ಟೇ ಅಲ್ಲ, ಇವತ್ತು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನದ ಮೆಹ್ಸೂದ್ ಹಾಗೂ ಅಮಿರ್ ಅಲ್ ಮುಮಿನೀನ್ ಮುಲ್ಲಾ ಮೊಹಮ್ಮದ್ ಓಮರ್ ಮುಜಾಹಿದ್ ಭೇಟಿಯಾಗಿರುವುದು ತುಂಬಾ ಸಂತಸದ ವಿಷಯ. ನಮ್ಮೆಲ್ಲರನ್ನು ಅಲ್ಲಾಹ್ ಕಾಪಾಡುತ್ತಾನೆ. ಅದೇ ರೀತಿ ನಿಮ್ಮ ಅನುಮತಿ ಮೇರೆಗೆ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ಹೇಳುವ ಶಾಹಜಾದ್ ಮಾತುಗಳು ಕೂಡ ದಾಖಲಾಗಿದೆ.
ಮೇ 1ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿ ವಿಫಲವಾಗಿರುವ ಬಗ್ಗೆ ಶಾಹಜಾದ್ ನ್ಯೂಯೂರ್ಕ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದ. ನಾನು ತಪ್ಪು ಮಾಡಿರುವುದಾಗಿ ನೂರು ಬಾರಿ ಹೇಳುತ್ತೇನೆ ಎಂದು ತಿಳಿಸಿದ್ದ. ಅದೇ ರೀತಿ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕ ಪಡೆಗಳು ತೊಗಗಬೇಕು. ಸೋಮಾಲಿಯ, ಯೆಮೆನ್, ಪಾಕಿಸ್ತಾನದಲ್ಲಿ ನಡೆಸುತ್ತಿರುವ ಡ್ರೋನ್ ದಾಳಿಯನ್ನೂ ನಿಲ್ಲಿಸಬೇಕು. ಮುಸ್ಲಿಮರ ಜಾಗಗಳನ್ನು ಆಕ್ರಮಣ ಮಾಡುವುದನ್ನು, ಮುಸ್ಲಿಮರ ಮಾರಣಹೋಮ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದ.