ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದ ಕುರಿತು ಪಾಕಿಸ್ತಾನ ತನಿಖೆ ನಡೆಸುವುದು ಮತ್ತು ಅದಕ್ಕೆ ಜವಾಬ್ದಾರರಾದವರನ್ನು ಕಾನೂನಿನ ಕಟಕಟೆಗೆ ತರುವುದು ಆ ದೇಶಕ್ಕೆ ಮತ್ತು ಇಡೀ ಪ್ರಾಂತ್ಯದ ಸುರಕ್ಷತೆಗೆ ಅಗತ್ಯವಾಗಿದೆ ಎಂದು ಅಮೆರಿಕಾ ಹೇಳಿದೆ.
166 ಅಮಾಯಕರ ಸಾವಿಗೆ ಕಾರಣವಾದ ಮುಂಬೈ ದಾಳಿ ಪ್ರಕರಣದ ಕುರಿತು ಪಾಕಿಸ್ತಾನದ ಕುರಿತು ಸಮಾಲೋಚನೆ ನಡೆಸುವುದನ್ನು ಅಮೆರಿಕಾ ಮುಂದುವರಿಸುತ್ತದೆ ಎಂದು ತನ್ನ ದೈನಂದಿನ ಸುದ್ದಿ ವಿವರಣೆಯಲ್ಲಿ ಅಮೆರಿಕಾ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೀ ತಿಳಿಸಿದ್ದಾರೆ.
ಇಲ್ಲಿ ಪಾಕಿಸ್ತಾನ ಕ್ರಮ ಕೈಗೊಳ್ಳಲೇಬೇಕಾದ ಕೆಲವು ಪ್ರಕರಣಗಳಿವೆ. ಮುಂಬೈ ದಾಳಿಯಲ್ಲಿ ಪಾಲ್ಗೊಂಡ ಮತ್ತು ಪಿತೂರಿ ನಡೆಸಿದವರನ್ನು ಕಾನೂನಿನ ಕಟಕಟೆಗೆ ತರುವುದು ಮತ್ತು ಈ ಕುರಿತು ತನಿಖೆ ಮುಂದುವರಿಸುವ ಅಗತ್ಯವಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾ ಮುಂಬೈ ದಾಳಿಯನ್ನು ಸಂಘಟಿಸಿದೆ ಎಂದು ಭಾರತ ಆರೋಪಿಸುತ್ತಾ ಬಂದಿದ್ದು, ಈ ಸಂಬಂಧ ಜೀವಂತವಾಗಿ ಸೆರೆ ಸಿಕ್ಕಿರುವ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಎಂಬಾತನಿಗೆ ಗಲ್ಲು ಶಿಕ್ಷೆಯನ್ನು ವಿಶೇಷ ನ್ಯಾಯಾಲಯವು ಪ್ರಕಟಿಸಿದೆ.
ಈ ಸಂಬಂಧ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಝಾಕೀರ್ ರೆಹಮಾನ್ ಸೇರಿದಂತೆ ಏಳು ಮಂದಿ ಶಂಕಿತರನ್ನು ಪಾಕಿಸ್ತಾನ ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದರೂ, ಇನ್ನಷ್ಟು ರೂವಾರಿಗಳನ್ನು ಇಸ್ಲಾಮಾಬಾದ್ ಬಂಧಿಸಬೇಕು ಎಂದು ಭಾರತ ಒತ್ತಾಯಿಸುತ್ತಾ ಬಂದಿದೆ.