ಪ್ರಸಕ್ತ ವರ್ಷ ಭಾರೀ ಮಳೆಯಿಂದಾಗಿ ಉಂಟಾದ ನೆರೆಯಿಂದಾಗಿ ಚೀನಾದಲ್ಲಿ ಕನಿಷ್ಠ 742 ಮಂದಿ ಸಾವನ್ನಪ್ಪಿದ್ದಾರೆ. 367ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ಸರಕಾರ ಶುಕ್ರವಾರ ಹೇಳಿಕೆ ನೀಡಿದೆ.
ಚೀನಾದ 28 ಪ್ರಾಂತ್ಯಗಳ 12 ಕೋಟಿ ಪ್ರಜೆಗಳು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. 76 ಲಕ್ಷ ಹೆಕ್ಟೇರ್ ಬೆಳೆಗಳಿಗೆ ಹಾನಿಯಾಗಿದೆ ಎಂದು ರಾಷ್ಟ್ರೀಯ ನೆರೆ ನಿಯಂತ್ರಣ ಮತ್ತು ಬರ ಪರಿಹಾರ ಪ್ರಾಧಿಕಾರದ ಪ್ರಧಾನ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಪ್ರವಾಹದಿಂದಾಗಿ 6,70,000 ಮನೆಗಳು ಕುಸಿತ ಕಂಡಿವೆ. ಒಟ್ಟಾರೆ ಇದರಿಂದಾಗಿ 22.51 ಬಿಲಿಯನ್ ಡಾಲರ್ ಆರ್ಥಿಕ ನಷ್ಟಕ್ಕೆ ಪ್ರವಾಹ ಕಾರಣವಾಗಿದೆ.
ಚೀನಾದ ಮೇಲೆ 'ಚಾಂಟು' ಚಂಡಮಾರುತ ಗುರುವಾರ ಹಾದು ಹೋಗಿರುವ ಪರಿಣಾಮ 13 ಲಕ್ಷ ನಿವಾಸಿಗಳು ನಿರಾಶ್ರಿತರಾಗಿದ್ದಾರೆ. ಸುಮಾರು 2,915 ಮನೆಗಳು ಇದರಿಂದಾಗಿ ನಾಶವಾಗಿವೆ. ಅಂದಾಜುಗಳ ಪ್ರಕಾರ ಚಂಡಮಾರುತದಿಂದ 354.51 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ವರದಿಗಳು ಹೇಳಿವೆ.