ಫ್ರಾನ್ಸ್: ನಿಷೇಧಕ್ಕೆ ಬೆಲೆ ಇಲ್ಲ-ಬುರ್ಖಾ ಧರಿಸಿ ಸ್ವಿಮ್ಮಿಂಗ್!
ಲಂಡನ್, ಶುಕ್ರವಾರ, 23 ಜುಲೈ 2010( 19:53 IST )
ಫ್ರಾನ್ಸ್‌ನ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿ ಆದೇಶ ಹೊರಡಿಸಿದ್ದರು ಕೂಡ ಇಬ್ಬರು ಮುಸ್ಲಿಮ್ ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ಬುರ್ಖಾ ಧರಿಸಿ ಸಾರ್ವಜನಿಕ ಈಜುಕೊಳದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಇಬ್ಬರೂ ಮುಸ್ಲಿಮ್ ಮಹಿಳೆಯರು ಬುರ್ಖಾ ಮಾದರಿಯ ವಿಶೇಷ ತೆರನಾದ ಈಜುಡುಗೆಯನ್ನು ಹಾಕಿಕೊಂಡೇ ಈಜುಕೊಳದಲ್ಲಿ ಈಜಿರುವುದಾಗಿ ಡೈಲಿ ಮೇಲ್ ಪತ್ರಿಕೆ ವರದಿ ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಿರುವುದಾಗಿ ಫ್ರಾನ್ಸ್ ಅಧಿಕೃತವಾಗಿ ಘೋಷಿಸಿದ ಬಳಿಕ ಈ ಘಟನೆ ನಡೆದಿದೆ. ಪೂರ್ಣ ಪ್ರಮಾಣದಲ್ಲಿ ಮುಖ ಮುಚ್ಚುವ ರೀತಿಯಲ್ಲಿ ಬಟ್ಟೆ ಧರಿಸುವುದು ದೇಶದ ಜಾತ್ಯತೀತ ಮೌಲ್ಯಕ್ಕೆ ಅವಮಾನ ಮಾಡಿದಂತೆ ಎಂದು ಕೂಡ ಫ್ರಾನ್ಸ್ ಎಚ್ಚರಿಸಿತ್ತು. ಒಂದು ವೇಳೆ ಬುರ್ಖಾ ಧರಿಸಿರುವುದು ಕಂಡು ಬಂದಲ್ಲಿ ಅಂತಹ ಮಹಿಳೆಯರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವುದಾಗಿ ಕಾನೂನು ಮಾಡಲಾಗಿತ್ತು.
ಈಜುಕೊಳದಲ್ಲಿ ಈಜುಡುಗೆಯನ್ನು ಮಾತ್ರ ಧರಿಸಬೇಕೆಂಬುದು ನಿಯಮ. ಆದರೆ ಇಬ್ಬರೂ ಮಹಿಳೆಯರು ಬುರ್ಖಾ ಮಾದರಿಯ ಬಟ್ಟೆ ಧರಿಸಿದ್ದರು. ಆದರೆ ಇಬ್ಬರೂ ಮುಸ್ಲಿಮ್ ಜೋಡಿಗಳು ಅಲ್ಲಿಂದ ತೆರಳಿದ್ದು, ಅವರ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ ಎಂದು ಈಜುಕೊಳದ ಸಿಬ್ಬಂದಿಗಳು ತಿಳಿಸಿದ್ದಾರೆ.