ನವದೆಹಲಿ: ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಉಗ್ರರ ವಿರುದ್ಧ ಜಂಟಿ ತನಿಖೆ ನಡೆಸುವುದು ಸಹಿತ ಹಲವು ಭಯೋತ್ಪಾದನಾ ನಿಗ್ರಹ ಒಪ್ಪಂದಗಳಿಗೆ ಭಾರತ ಮತ್ತು ಅಮೆರಿಕಾ ಸಹಿ ಹಾಕಿವೆ. ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಉಪಸ್ಥಿತಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರೊಂದಿಗೆ ಭಾರತದ ಅಮೆರಿಕ ರಾಯಭಾರಿಯಾಗಿರುವ ತಿಮೊತಿ ಜೇ. ರೋಮರ್ ಒಪ್ಪಂದಕ್ಕೆ ಸಹಿ ಹಾಕಿದರು.
ಸೈಬರ್ ಮತ್ತು ಉಗ್ರಾಗಾಮಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಹರಿಯುವುದು ತಡೆಯುವುದು. ಗಡಿ ಭದ್ರತಾ ವಿಷಯಗಳಲ್ಲಿ ಪರಸ್ಪರ ಸಹಕಾರ, ತನಿಖಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು, ವಾಹನ ಸೌಕರ್ಯ ಮತ್ತು ರೈಲ್ವೇ ಭದ್ರತೆ ಕೂಡಾ ಇದರಲ್ಲಿ ಸೇರಿಕೊಂಡಿದೆ.
ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಉಭಯ ದೇಶಗಳು ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಮಹತ್ವದ ಕ್ರಮಗಳಿಗೆ ಮುಂದಾಗಿದೆ ಎಂದು ಭಾರತದ ಅಮೆರಿಕ ರಾಯಭಾರಿಯಾಗಿರುವ ತಿಮೊತಿ ಜೇ. ರೋಮರ್ ತಿಳಿಸಿದರು. ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಗುಪ್ತಮಾಹಿತಿಯನ್ನು ಹಂಚಿಕೊಳ್ಳಲಿದೆ ಎಂದವರು ಹೇಳಿದರು.
2009 ನವೆಂಬರ್‌ನಲ್ಲಿ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕ ಭೇಟಿ ಸಂದರ್ಭದಲ್ಲಿ ಕರಾರಿಗೆ ಚಾಲನೆ ದೊರಕಿತ್ತು.