ಅಫ್ಘಾನ್ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಬುಡಕಟ್ಟು ಪ್ರಾಂತ್ಯದ ಶಂಕಿತ ಭಯೋತ್ಪಾದಕರ ಅಡಗುದಾಣಗಳ ಮೇಲೆ ಶನಿವಾರ ಅಮೆರಿಕಾ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 16 ಉಗ್ರರು ಹತರಾಗಿದ್ದಾರೆ ಎಂದು ಬೇಹುಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ವಜಿರಿಸ್ತಾನದ ನಾಜಾಯ್ ನರೈ ಪ್ರದೇಶದಲ್ಲಿನ ಆವರಣವೊಂದರ ಮೇಲೆ ಆರು ಕ್ಷಿಪಣಿ ದಾಳಿಯನ್ನು ಅಮೆರಿಕಾ ನಡೆಸಿತ್ತು.
ವಿದೇಶಿ ಭಯೋತ್ಪಾದಕರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತ್ತವರ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ. ಅವರು ಯಾರು, ಯಾವ ದೇಶಕ್ಕೆ ಸೇರಿದವರು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅಧಿಕೃತವಾಗಿ ನೀಡಲು ನಮಗೆ ಅನುಮತಿ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ದಾಳಿ ಕುರಿತು ಪಾಕಿಸ್ತಾನದ ಮಿಲಿಟರಿ ವಕ್ತಾರರು ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಮೆರಿಕಾವು ಮಾನವ ರಹಿತ ವಿಮಾನಗಳ ಮೂಲಕ ಡ್ರೋನ್ ದಾಳಿ ನಡೆಸುತ್ತಿದ್ದು, ಇದುವರೆಗೆ ಸಾವಿರಾರು ಉಗ್ರರನ್ನು ಕೊಂದು ಹಾಕಿದೆ. ಸೆಪ್ಟೆಂಬರ್ 11ರ ಅಮೆರಿಕಾ ದಾಳಿಯ ನಂತರ ಪಾಕ್ ಮಿಲಿಟರಿ ಜತೆ ಸೇರಿಕೊಂಡು ಅಮೆರಿಕಾ ಸೇನೆಯು ದಾಳಿಯನ್ನು ಸಂಘಟಿಸುತ್ತಿದೆ.