ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ: ಜಡ್ಜ್ ಗೈರು-ವಿಚಾರಣೆ ಮತ್ತೆ ಮುಂದಕ್ಕೆ (Pak court | Pakistan | Zakiur Rehman Lakhvi | Islamabad | adjourns trial)
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್ ಇ ತೊಯ್ಬಾದ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿ ಹಾಗೂ ಆರು ಮಂದಿ ಶಂಕಿತರ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ವಿಚಾರಣೆಯನ್ನ ಶನಿವಾರ ಮತ್ತೆ ಒಂದು ವಾರಗಳ ಕಾಲ ಮುಂದೂಡಿದೆ.
ಭದ್ರತೆಯ ದೃಷ್ಟಿಯಿಂದ ಭಯೋತ್ಪಾದನಾ ನಿಗ್ರಹ ಕೋರ್ಟ್ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿಯೇ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಖ್ವಾಜಾ ಮುಹಮ್ಮದ್ ಶರೀಫ್ ಅವರು ಲಾಹೋರ್‌ನಲ್ಲಿ ಕರೆದಿರುವ ಸಭೆಗೆ ನ್ಯಾಯಾಧೀಶ ಮಲಿಕ್ ಅವರು ತೆರಳಿದ್ದರಿಂದ ಇಂದಿನ ವಿಚಾರಣೆಗೆ ಗೈರುಹಾಜರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಮುಂಬೈ ದಾಳಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ನ್ಯಾಯಾಧೀಶ ಅವಾನ್ ಅವರು ಮುಂದಿನ ಮೂರು ವಾರಗಳ ಕಾಲ ರಜೆಯ ಮೇಲೆ ತೆರಳಿರುವುದರಿಂದ ಈ ವಿಚಾರಣೆ ಮತ್ತಷ್ಟು ವಿಳಂಬವಾಗಲಿದೆ ಎಂದು ಮೂಲವೊಂದು ಹೇಳಿದೆ.