ಆಸ್ಟ್ರೇಲಿಯಾ: ಗುಂಡು ಹೊಡೆದದ್ದು ಜಿಂಕೆಗೆ, ಸತ್ತಿದ್ದು ಬಾಲಕಿ!
ಮೆಲ್ಬೊರ್ನ್, ಸೋಮವಾರ, 26 ಜುಲೈ 2010( 13:43 IST )
ನಿರ್ಲಕ್ಷ್ಯ ಎಂತಹ ಅವಘಡಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಜಿಂಕೆಗಳನ್ನು ಬೇಟೆಯಾಡಲು ಹೊರಟಿದ್ದ ಗುಂಪೊಂದು, ಜಿಂಕೆ ಎಂದು ಭಾವಿಸಿ ಹಾರಿಸಿದ ಗುಂಡಿಗೆ ಬಾಲಕಿಯೊಬ್ಬಳು ಬಲಿಯಾದ ದಾರುಣ ಘಟನೆ ವಿಕ್ಟೋರಿಯಾದಲ್ಲಿ ನಡೆದಿದೆ.
19ರ ಹರೆಯದ ಬಾಲಕಿ ತನ್ನ ಅಣ್ಣ ಹಾಗೂ ಅಣ್ಣನ ಗಳೆಯನ ಜೊತೆ ಬೇಟೆಯಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಗೆಳೆಯ ಜಿಂಕೆ ಎಂದು ಭಾವಿಸಿ ಹಾರಿಸಿದ ಗುಂಡಿಗೆ ಬಾಲಕಿಯೇ ಸಾವನ್ನಪ್ಪಿರುವ ಘಟನೆ ಉತ್ತರ ವಿಕ್ಟೋರಿಯಾದ ನೂರಾಂಗ್‌ಗಾಂಗ್ ಎಂಬಲ್ಲಿ ಸಂಭವಿಸಿದೆ.
ಗುಂಪಿನೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಲಕಿ ಅವರಿಂದ ಬೇರ್ಪಟ್ಟಿದ್ದಳು. ಆ ಸಂದರ್ಭದಲ್ಲಿ ಜಿಂಕೆಯ ಜಾಡನ್ನು ಹಿಡಿದು ಹೊರಟವರು ಶಬ್ದವನ್ನು ಆಲಿಸಿ ಗುಂಡು ಹಾರಿಸಿದ್ದರು. ಆದರೆ ಗುಂಡಿಗೆ ಆಹುತಿಯಾಗಿದ್ದು ಜಿಂಕೆಯಲ್ಲ, ಬದಲಿಗೆ ಜೊತೆಗೆ ಬಂದಿದ್ದ ಬಾಲಕಿ ಎಂದು ವಿಕ್ಟೋರಿಯಾ ಪೊಲೀಸರು ವಿವರಿಸಿದ್ದಾರೆ.
ತಪ್ಪು ಗ್ರಹಿಕೆಯಿಂದ ಗುಂಡು ಹಾರಿಸಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದಿರುವ ಪೊಲೀಸ್ ಅಧಿಕಾರಿಗಳು, ಘಟನೆ ಕುರಿತಂತೆ ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಆದರೆ ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿರುವುದಾಗಿ ದಿ ಏಜ್ ಪತ್ರಿಕೆ ವರದಿ ತಿಳಿಸಿದೆ.
ಘಟನೆ ಕುರಿತು ಮಾಹಿತಿ ತಿಳಿದು ಬಂದ ಕೂಡಲೇ ಪೊಲೀಸರು ಅಂಬ್ಯುಲೆನ್ಸ್ ಜೊತೆಗೆ ತೆರಳಿದಾಗ,ಸ್ಥಳದಲ್ಲಿಯೇ ಬಾಲಕಿ ಮೃತಪಟ್ಟಿದ್ದಳು. ನಂತರ ಮೃತದೇಹವನ್ನು ಸ್ಥಳದಿಂದ ತರಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.