ಚೀನಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಕ್ಕಿ ಹರಿಯುತ್ತಿದ್ದು, ಶಾನ್ಸ್‌ಕಿ ಪ್ರಾಂತ್ಯದಲ್ಲಿ ಕಳೆದ 11 ದಿನಗಳಲ್ಲಿ 111 ಜನ ಸಾವನ್ನಪ್ಪಿದ್ದಾರೆ ಮತ್ತು 167 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂಭದ್ರೋಣ ಮಳೆಯಿಂದಾಗಿ ಹಂಜಿಯಾಂಗ್ ಮತ್ತು ಇತರ ನದಿಗಳು ಉಕ್ಕಿ ಹರಿದ ಪರಿಣಾಮ ಶಾನ್ಸ್‌ಕಿ ಪ್ರಾಂತ್ಯದ ಅಂಕಾಂಗ್, ಹಾಂಝಾಂಗ್ ಮತ್ತು ಶಾಂಗ್ಲೂ ನಗರಗಳು ಜುಲೈ 14ರಿಂದ 19ರವರೆಗೆ ಭಾರೀ ತೊಂದರೆ ಅನುಭವಿಸಿದ್ದವು. ಬಳಿಕ ಮತ್ತೊಂದು ಸುತ್ತಿನ ಅನಾಹುತ ಗುರುವಾರ ಆರಂಭವಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ನೆರೆಯಿಂದಾಗಿ 42.5 ಲಕ್ಷ ಮಂದಿಗೆ ಪ್ರವಾಹ ಸಂತ್ರಸ್ತರಾಗಿದ್ದಾರೆ. ಸುಮಾರು 7.03 ಲಕ್ಷ ನಾಗರಿಕರನ್ನು ಸ್ಥಳಾಂತರಿಸಲಾಗಿದೆ.
ಅಂಕಾಂಗ್ ನಗರವೊಂದರಲ್ಲೇ 63 ಮಂದಿ ಸಾವನ್ನಪ್ಪಿದ್ದು, 119 ಮಂದಿ ಕಾಣೆಯಾಗಿದ್ದಾರೆ. 2,824 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರವಾಹದಿಂದಾಗಿ ಸುಮಾರು 9.56 ಬಿಲಿಯನ್ ಯಾನ್ ನಷ್ಟವಾಗಿದೆ ಎಂದು ಪ್ರಾಂತ್ಯ ಅಂದಾಜಿಸಿದೆ.