2008ರ ಜುಲೈ ತಿಂಗಳಲ್ಲಿ ಅಫಘಾನಿಸ್ತಾನದಲ್ಲಿನ ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿಗೆ ಬಾಂಬ್ ದಾಳಿ ನಡೆಯುವ ವಾರದ ಮೊದಲು ತಾಲಿಬಾನ್‌ನಿಂದ ದಾಳಿ ನಡೆಯುವ ಸಾಧ್ಯತೆಯಿದೆ ಮತ್ತು ಇದರ ಜತೆ ಪಾಕಿಸ್ತಾನದ ಐಎಸ್ಐ ಕೂಡ ನೇರ ಸಂಪರ್ಕ ಹೊಂದಿದೆ ಎಂದು ಪೋಲೆಂಡ್ ಬೇಹುಗಾರಿಕಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಎಂದು ಅಮೆರಿಕಾ ಮಿಲಿಟರಿಯ ಸೋರಿಕೆಯಾದ ದಾಖಲೆಗಳು ಹೇಳುತ್ತಿವೆ ಎಂದು ವರದಿಗಳು ಹೇಳಿವೆ.
ಭಾರತ ಮತ್ತು ಅಫಘಾನಿಸ್ತಾನದ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಲು ಐಎಸ್ಐ ಒಂದು ಅರೆ ಸ್ವಾಯತ್ತ 'ಎಸ್-ವಿಂಗ್' ಅಸ್ತಿತ್ವಕ್ಕೆ ತಂದಿತ್ತು ಮತ್ತು ಸಂಘಟನೆಯ ಓರ್ವ ಪ್ರಭಾವಿ ಅಧಿಕಾರಿಯನ್ನು ಕಾಬೂಲ್ ಆತ್ಮಹತ್ಯಾ ದಾಳಿ ಮೇಲ್ವಿಚಾರಣೆಗೆ ಬಿಟ್ಟಿತ್ತು ಎಂದು ಸೋರಿಕೆಯಾದ ಅಮೆರಿಕಾ ದಾಖಲೆಗಳು ಹೇಳುತ್ತಿವೆ.
ಕಾಬೂಲ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ತಾಲಿಬಾನ್ ಯೋಜನೆ ರೂಪಿಸುತ್ತಿದೆ. ಇದನ್ನು ಕಾರ್ಯಗತಗೊಳಿಸಲು ತಾಲಿಬಾನ್ ಓರ್ವ ಇಂಜಿನಿಯರ್‌ನನ್ನು ನೇಮಕಗೊಳಿಸಿದೆ. 2008ರ ಜೂನ್ 30ರಂದು ಈ ಸಂಭಾವ್ಯ ದಾಳಿ ನಡೆಯಲಿದೆ ಎಂದು ದಾಳಿ ನಡೆದ ಸರಿಸುಮಾರು ವಾರದ ಹಿಂದೆ ಪೋಲಿಶ್ ಬೇಹುಗಾರಿಕಾ ಇಲಾಖೆಯು ತನ್ನ ಎಚ್ಚರಿಕೆ ನೀಡಿತ್ತು.
ಇದನ್ನು ನಿರ್ಲಕ್ಷಿಸಿದ್ದ ಅಮೆರಿಕಾ, ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆಯುತ್ತಿದ್ದಂತೆ ಎಚ್ಚರಗೊಂಡಿತ್ತು ಮತ್ತು 'ಸಿಐಎ'ಯ ಆಗಿನ ಉಪ ನಿರ್ದೇಶಕ ಸ್ಟೀಫನ್ ಆರ್. ಕಾಪೆಸ್ ಇಸ್ಲಾಮಾಬಾದ್‌ಗೆ ಭೇಟಿ ನೀಡಿ ಐಎಸ್‌ಐಯನ್ನು ತರಾಟೆಗೆ ತೆಗೆದುಕೊಂಡಿದ್ದರು. ದಾಳಿಗೆ ಐಎಸ್ಐ ಸಹಕರಿಸಿದೆ ಎಂಬ ದಾಖಲೆಗಳನ್ನು ಅದರ ಮುಂದಿಟ್ಟಿದ್ದರು.
ಆದರೆ ಇದೀಗ ಸೋರಿಕೆಯಾಗಿರುವ ದಾಖಲೆಗಳ ಪ್ರಕಾರ, ಸಂಭಾವ್ಯ ದಾಳಿಯ ಕುರಿತು ಭಾರತೀಯ ರಾಯಭಾರ ಕಚೇರಿಗೆ ಎಚ್ಚರಿಕೆ ನೀಡಲಾಗಿತ್ತೇ ಎಂಬ ವಿವರಗಳು ಲಭ್ಯವಿಲ್ಲ.
2008ರ ಜುಲೈ 7ರಂದು ಕಾಬೂಲ್‌ನ ಭಾರತೀಯ ರಾಯಭಾರಿ ಕಚೇರಿಗೆ ಸ್ಫೋಟಕಗಳನ್ನು ಹೊಂದಿದ್ದ ಕಾರನ್ನು ಭಯೋತ್ಪಾದಕರು ನುಗ್ಗಿಸಿದ್ದರು. ಇದರಿಂದ 58 ಮಂದಿ ಮೃತಪಟ್ಟು, 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.