ಹುಣಸೆ ಹಳತಾದರು, ಹುಳಿ ಮುಪ್ಪೆ ಎಂಬ ಗಾದೆ ಮಾತಿನಂತೆ ಪ್ರೀತಿ ಹಾಗೂ ಮದುವೆಯಾಗಲು ವಯಸ್ಸಿನ ಮಿತಿಯೇ ಇಲ್ಲ ಎಂಬುದಕ್ಕೆ ಉದಾಹರಣೆ ಎಂಬಂತೆ, ಬ್ರಿಟನ್‌ನ 97ರ ಹರೆಯದ ಅಜ್ಜ ಹಾಗೂ 87ರ ಹರೆಯದ ಅಜ್ಜಿ ಹಸೆಮಣೆ ಏರುವ ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ.
ಇನ್ನೇನು ಮೂರು ವರ್ಷ ಕಳೆದರೆ ಹೆನ್ರಿ ಕೆರ್ರ್ ನೂರು ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳ(?)ಲಿದ್ದಾರೆ. ಇದೀಗ 87ರ ಮಧುವಣಗಿತ್ತಿ ವಲೆರೈ ಬೆರ್ಕೊವಿಟ್ಜ್ ನೂತನ ಹಿರಿಯ ದಂಪತಿಗಳಾದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ವಲೆರೈ ಹೆನ್ರಿ ಅವರ ಪೊಯೆಟ್ರಿ ರೀಡಿಂಗ್ ಸರ್ಕಲ್‌ಗೆ ಸೇರಿಕೊಂಡ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಅಂಕುರವಾಗಿತ್ತಂತೆ. ಹಾಗಾಗಿ ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಗೆಳೆಯರಾಗಿಯೇ ಇದ್ದರಂತೆ. ವಲೆರೈ ಅವರು ಜೋಹಾನ್ಸ್‌ಬರ್ಗ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.
ಒಂದು ದಿನ ಅಜ್ಜ ಹೆನ್ರಿ ವಲೆರೈಗೆ ಒಂದು ಕಪ್ ಟೀ ಕೊಟ್ಟು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದರಂತೆ. ಆದರೆ ತನಗೆ ಸ್ವಲ್ಪ ಕಾಲಾವಕಾಶ ಬೇಕೆಂದು ವಲೆರೈ ಕೇಳಿಕೊಂಡಿದ್ದರಂತೆ. ಏಕಾಏಕಿ ಮದುವೆ ಬಗ್ಗೆ ಹೇಳಿದಾಗ, ಇದೊಂದು ಹಾಸ್ಯ ಎಂದೇ ಭಾವಿಸಿದ್ದಳು. ಆದರೆ ನಂತರ ಗ್ರೀನ್ ಸಿಗ್ನಲ್ ಸಿಕ್ಕಿತ್ತು ಎಂಬ ವಿವರಣೆ ಹೆನ್ರಿ ಅಜ್ಜನದ್ದು. ಅಲ್ಲ, ಮದುಮಗನದ್ದು!
ಅಂತೂ 97ರ ಅಜ್ಜ ಹಾಗೂ 87ರ ಅಜ್ಜ ಇದೀಗ ದಂಪತಿಗಳಾಗುವ ಮೂಲಕ ವಿಶ್ವದ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿರಿಯ ವೈವಾಹಿಕ ಜೋಡಿಗೆ ಕುಟುಂಬದವರು, ಮಿತ್ರರು ಶುಭ ಹಾರೈಸಿದ್ದಾರೆ.