ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಷ್ಯಾ-ಹಿಂದೂ ದೇವಾಲಯಕ್ಕೆ ವಿರೋಧ: 12 ಮುಸ್ಲಿಮರಿಗೆ ದಂಡ (Hindu temple | Malaysia | Muslims fined | cow's head | court)
Bookmark and Share Feedback Print
 
ಹಿಂದೂ ದೇವಾಲಯ ನಿರ್ಮಾಣ ವಿರೋಧಿಸಿ ಮತ್ತು ಅಮಾನವೀಯ ರೀತಿಯಲ್ಲಿ ದನದ ತಲೆಯನ್ನು ಹಿಡಿದು ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ 12 ಮುಸ್ಲಿಮರಿಗೆ ಮಂಗಳವಾರ ಮಲೇಷ್ಯಾ ಕೋರ್ಟ್ ದಂಡ ವಿಧಿಸಿದ್ದು, ಒಬ್ಬರಿಗೆ ಒಂದು ವಾರಗಳ ಕಾಲ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಳೆದ ಆಗೋಸ್ಟ್ ತಿಂಗಳಿನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾದ ಮೂರು ಕಟ್ಟಾ ಧಾರ್ಮಿಕ ಗುಂಪುಗಳಾದ ಮಾಲೈ ಮುಸ್ಲಿಮ್ ಗುಂಪು, ಚೀನಾ ಹಾಗೂ ಭಾರತೀಯ ಅಲ್ಪಸಂಖ್ಯಾತರ(ಬೌದ್ದ, ಕ್ರಿಶ್ಚಿಯನ್ ಅಥವಾ ಹಿಂದು) ನಡುವೆ ತಲೆದೋರಿದ ಬಿಕ್ಕಟ್ಟು ಸಾಕಷ್ಟು ಉದ್ವಿಗ್ನ ಸ್ಥಿತಿಗೆ ಕಾರಣವಾಗಿತ್ತು.

ಮುಸ್ಲಿಮ್ ಪ್ರಾಬಲ್ಯವುಳ್ಳ ನೆರೆಯ ಪ್ರದೇಶದಲ್ಲಿ ಸರಕಾರ ಹಿಂದೂ ದೇವಾಲಯವನ್ನು ಕಟ್ಟಲು ಮುಂದಾಗಿರುವುದನ್ನು ವಿರೋಧಿಸಿ 12 ಮಂದಿ ಮುಸ್ಲಿಮರು 2009ರ ಆಗೋಸ್ಟ್ 28ರಂದು ಮಸೀದಿಯಿಂದ ದನದ ತಲೆಯನ್ನು ಹಿಡಿದುಕೊಂಡು ಸಿಲಾಂಗೋರ್ ಸ್ಟೇಟ್ ಮುಖ್ಯಮಂತ್ರಿಗಳ ಕಚೇರಿಗೆ ಮೆರವಣಿಗೆ ನಡೆಸಿದ್ದರು.

ಪ್ರತಿಭಟನೆಯುದ್ದಕ್ಕೂ ಕೆಲವು ಪ್ರತಿಭಟನಾಕಾರರು ದನದ ತಲೆಯನ್ನು ಹಿಡಿದು ಕುಣಿದು, ನಂತರ ಹಿಂದೂಗಳ ವಿರುದ್ಧ ಕಟುವಾದ ಮಾತುಗಳಿಂದ ಭಾಷಣ ಬಿಗಿದಿದ್ದರು. ಹಿಂದೂಗಳ ಪಾಲಿಗೆ ಗೋವು ಅತ್ಯಂತ ಪವಿತ್ರವಾದ ಪ್ರಾಣಿ. ಆ ನಿಟ್ಟಿನಲ್ಲಿ ಗೋವಿನ ತಲೆ ಹಿಡಿದು ಪ್ರತಿಭಟನೆ ನಡೆಸಿರುವುದನ್ನು ಕಾನೂನು ಬಾಹಿರವಾಗಿರುವುದರಿಂದ 12 ಮಂದಿ ಮುಸ್ಲಿಮ್ ಪ್ರತಿಭಟನಾಕಾರರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಪ್ರಕರಣದ ಕುರಿತು 12 ಮಂದಿಯೂ ತಾವು ತಪ್ಪಿತಸ್ಥರು ಎಂದು ಸಿಲಾಂಗೋರ್ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ತಪ್ಪೊಪ್ಪಿಕೊಂಡಿದ್ದಾರೆ. ತಪ್ಪಿತಸ್ಥರಿಗೆ ತಲಾ 1000ರಿಂಗ್ಗಿಟ್(320ಡಾಲರ್) ದಂಡ ವಿಧಿಸಿರುವುದಾಗಿ ಸರಕಾರಿ ವಕೀಲರಾದ ಅಫಿಫುದ್ದೀನ್ ಹಾಫಿಫಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅವರೆಲ್ಲ ಒಂದು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ದನದ ತಲೆ ಹಿಡಿದು ಪ್ರತಿಭಟನೆ ನಡೆಸಿ, ಸರಕಾರಿ ವಿರೋಧಿ ಚಳವಳಿ ಆರೋಪದ ಮೇಲೆ ಇಬ್ಬರಿಗೆ ಹೆಚ್ಚುವರಿಯಾಗಿ ತಲಾ 960ಡಾಲರ್ ದಂಡ ವಿಧಿಸಿದ್ದು, ಒಬ್ಬನಿಗೆ ಒಂದು ವಾರಗಳ ಕಾಲ ಜೈಲುಶಿಕ್ಷೆ ವಿಧಿಸಿರುವುದಾಗಿ ವಕೀಲರು ವಿವರಿಸಿದ್ದಾರೆ.

ಸಿಲಾಂಗೋರ್‌ನಲ್ಲಿ ಮಲೇಷ್ಯಾ ಸರಕಾರ ಹೊಸ ಜಮೀನಿನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಕೆಲವು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿತ್ತು. ಅದನ್ನು ವಿರೋಧಿಸಿ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಕೋರ್ಟ್ ಈ ದಂಡ ವಿಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ