ವಿಶ್ವಾಸಮತ ಗಳಿಸುವ ವಿಶ್ವಾಸ ಇಲ್ಲದ ಪರಿಣಾಮವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಧಾನಿ ರಾಜಾ ಫಾರೂಕ್ ಹೈದರ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
25 ಮಂದಿ ಸಚಿವರಲ್ಲಿ ಈಗಾಗಲೇ 18 ಸಚಿವರು ರಾಜೀನಾಮೆ ನೀಡಿದ್ದರು. ಈ ನೆಲೆಯಲ್ಲಿ ಪಿಒಕೆ ಅಸೆಂಬ್ಲಿಯಲ್ಲಿ ಮಂಗಳವಾರ ವಿಶ್ವಾಸಮತ ಸಾಬೀತುಪಡಿಸುವ ವಿಶ್ವಾಸ ಇಲ್ಲದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತನ್ನ ರಾಜೀನಾಮೆ ಪತ್ರವನ್ನು ಅಧ್ಯಕ್ಷ ರಾಜಾ ಜುಲ್‌ಕರ್‌ನೈನ್ ಅವರಿಗೆ ಕಳುಹಿಸಿರುವುದಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಹೈದರ್ ತಿಳಿಸಿದ್ದಾರೆ. ಕೇಂದ್ರದಲ್ಲಿ ಪಾಕಿಸ್ತಾನ ಪೀಪಲ್ಸ್ ಪಕ್ಷ ಅಧಿಕಾರದಲ್ಲಿದ್ದು, ಆ ನಿಟ್ಟಿನಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು ತಮಗೆ ಅಸಾಧ್ಯ ಎಂದರು. ಅಲ್ಲದೆ, ಪ್ರಧಾನಿ ಹುದ್ದೆ ತ್ಯಜಿಸುವಂತೆ ಮಾಡಿರುವ ಸಂಚಿನ ಹಿಂದೆ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರ ಕೈವಾಡ ಇರುವುದಾಗಿ ಗಂಭೀರವಾಗಿ ಆರೋಪಿಸಿದರು.
ತಮ್ಮ ಪರವಾಗಿ ಯಾವ ಸಚಿವರು ವಿಶ್ವಾಸಮತ ಚಲಾಯಿಸಲು ಸಿದ್ದರಿಲ್ಲ ಎಂದು ದೂರಿದರು. ಕಳೆದ ಒಂಬತ್ತು ತಿಂಗಳಿನಿಂದ ಪ್ರಧಾನಿ ಹುದ್ದೆ ನಿರ್ವಹಿಸಿರುವುದೇ ಪಾಕಿಸ್ತಾನಕ್ಕೆ ಆದ ಲಾಭ ಎಂದು ಆಕ್ರೋಶದಿಂದ ಹೇಳಿದರು. ತಮ್ಮ ಪದಚ್ಯುತಿಯ ಹಿಂದೆ ಪಾಕ್ ಸರಕಾರ ಸಕ್ರಿಯವಾಗಿ ಶಾಮೀಲಾಗಿರುವುದಾಗಿ ಅಸಮಾಧಾನವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂರು ಪ್ರಧಾನಿಗಳು ರಾಜೀನಾಮೆ ನೀಡಿದಂತಾಗಿದೆ. ಹೈದರ್ ಮೂರನೇ ಪ್ರಧಾನಿಯಾಗಿದ್ದಾರೆ.
ಹೈದರ್ ಅವರ ಮುಸ್ಲಿಮ್ ಕಾನ್ಫರೆನ್ಸ್ ಪಕ್ಷದೊಳಗೆ ಸಾಕಷ್ಟು ವೈಮನಸ್ಸು ಉಂಟಾಗಿರುವುದೇ ಹೈದರ್ ಅವರ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಪಿಪಿಪಿಯ ಹಿರಿಯ ಮುಖಂಡ, ಮಾಹಿತಿ ಖಾತೆ ಸಚಿವ ಖ್ವಾಮರ್ ಜಾಮನ್ ಖೈರಾ ತಿಳಿಸಿದ್ದಾರೆ. ಅವರ ರಾಜೀನಾಮೆ ಹಿಂದೆ ಫೆಡರಲ್ ಸರಕಾರದ ಯಾವ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೇ ಪಿಒಕೆಗೆ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಾಗುವುದು ಎಂದರು.