ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾವನ್ನು ನಿಷೇಧಿಸಿರುವ ಫ್ರಾನ್ಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಲ್ ಖಾಯಿದಾ ಸಂಘಟನೆಯ 2ನೇ ಮುಖಂಡ ಐಮನ್ ಅಲ್ ಜವಾಹರಿ, ಫ್ರಾನ್ಸ್‌ನ ಈ ಕ್ರಮವನ್ನು ಮುಸ್ಲಿಮ್ ಮಹಿಳೆಯರು ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾನೆ.ಅಷ್ಟೇ ಅಲ್ಲ ಎಷ್ಟೆ ಬೆಲೆ ತೆತ್ತಾದರೂ ಬುರ್ಖಾ ಧರಿಸುವುದನ್ನು ಮುಂದುವರಿಸಬೇಕೆಂದು ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಹಾಕಿರುವ ಆಡಿಯೋ ಟೇಪ್‌ನಲ್ಲಿ ಗುಡುಗಿದ್ದಾನೆ.
'ಫ್ರಾನ್ಸ್ ಜಾತ್ಯತೀತತೆಯ ಆದ್ಯ ಪ್ರವರ್ತಕವಾಗಿದ್ದು, ಇದೀಗ ಅದರ ಮುಖವಾಡ ಬಯಲಾಗಿದೆ. ಮುಸ್ಲಿಮ್ ಮಹಿಳೆಯರ ಬುರ್ಖಾ ಮತ್ತು ಮುಖಗವಸು ನಿಷೇಧಿಸಿರುವುದು ಅವಮಾನದ ಸಂಗತಿ ಎಂದು ಟೇಪ್‌ನಲ್ಲಿ ಜವಾಹರಿ ಕಿಡಿಕಾರಿದ್ದಾನೆ.
ಫ್ರಾನ್ಸ್ ಏನು ಮಾಡುತ್ತಿದೆ, ಅದು ಯುರೋಪ್ ಹಾಗೂ ಪಾಶ್ಚಾತ್ಯ ದೇಶಗಳಿಗೆ ಏನನ್ನು ಪಸರಿಸಲು ಹೊರಟಿದೆ. ಆ ನಿಟ್ಟಿನಲ್ಲಿ ಮುಸ್ಲಿಮರ ಧಾರ್ಮಿಕ ಕಟ್ಟಳೆಯನ್ನು ಅನುಸರಿಸಲು ಫ್ರಾನ್ಸ್ ಅನುವು ಮಾಡಿಕೊಡಬೇಕು ಎಂದು ತನ್ನ ಆಡಿಯೋ ಸಂದೇಶದಲ್ಲಿ ಸಲಹೆ ನೀಡಿದ್ದಾನೆ. ಆದರೆ ಜವಾಹರಿಯ ಈ ಸಂದೇಶ ಎಷ್ಟು ಸತ್ಯ ಎಂಬುದು ನಿಖರವಾಗಿಲ್ಲ.
'ನನ್ನ ಮುಸ್ಲಿಮ್ ಸಹೋದರಿಯರೇ, ನೀವು ಬುರ್ಖಾ ಧರಿಸುವುದನ್ನು ಕೈಬಿಡಬೇಡಿ. ಆ ಕಾರಣಕ್ಕಾಗಿ ಮುಸ್ಲಿಮ್ ಮಹಿಳೆಯರು ಹೋರಾಡಲು ಕೂಡ ಮುಂದಾಗಬೇಕು ಎಂದು ತಿಳಿಸಿದ್ದಾನೆ.