ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್‌ಗಳ ನೇಮಕಾತಿಗಾಗಿ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ 2006ರಲ್ಲಿ ಖುದ್ದಾಗಿ ಹಾಜರಾಗಿರುವುದಾಗಿ ಇದೀಗ ಬಯಲುಗೊಂಡಿರುವ ಅಮೆರಿಕ ಮಿಲಿಟರಿ ದಾಖಲಾತಿಯಿಂದ ತಿಳಿದು ಬಂದಿದೆ. ಅಲ್ಲದೆ, ಅಮೆರಿಕ ಮಿಲಿಟರಿಯ ದಾಖಲಾತಿ ಬಹಿರಂಗ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
2000ನೇ ಇಸವಿ ವೇಳೆಗೆ ಬಿನ್ ಲಾಡೆನ್ ಪಾಕಿಸ್ತಾನದ ಸರಹದ್ದಿನಲ್ಲಿಯೇ ಇದ್ದಿರುವುದಾಗಿ ಸಿಐಎ ವರಿಷ್ಠ ಲೆಯೋನ್ ಪನೆಟ್ಟಾ ಕಳೆದ ಬಾರಿ ತಿಳಿಸಿದ್ದರು. ಆದರೆ ಇದೀಗ ಅಮೆರಿಕ ಮಿಲಿಟರಿ ಗುಪ್ತಚರ ಇಲಾಖೆಯ ವರದಿ ವೆಬ್‌ಸೈಟ್‌ವೊಂದರಲ್ಲಿ ಬಹಿರಂಗಗೊಳ್ಳುವ ಮೂಲಕ ಒಸಾಮಾ, ಪಾಕ್, ತಾಲಿಬಾನ್ ನಿಕಟ ಸಂಬಂಧಗಳೆಲ್ಲಾ ಬಯಲಾಗಿದೆ.
2006ರಲ್ಲಿ ಆತ್ಮಹತ್ಯಾ ಬಾಂಬರ್ಸ್‌ಗಳ ನೇಮಕಾತಿಗಾಗಿ ನಡೆದ ಸಭೆಯಲ್ಲಿ ಒಸಾಮಾ ಖುದ್ದಾಗಿ ಪಾಕಿಸ್ತಾನಕ್ಕೆ ಬಂದಿರುವುದಾಗಿ ವರದಿ ವಿವರಿಸಿದೆ. ಆ ನಿಟ್ಟಿನಲ್ಲಿ ಕ್ವೆಟ್ಟಾ ಮತ್ತು ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಲಾಗಿತ್ತು. ಅದೇ ರೀತಿ ಉತ್ತರ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸಲು ಆರು ಆತ್ಮಹತ್ಯಾ ಬಾಂಬರ್ಸ್‌ಗಳಿಗೆ ಆದೇಶವನ್ನೂ ನೀಡಲಾಗಿತ್ತು ಎಂದು ವಿಕಿಲೀಕ್ಸ್ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿ ಗಾರ್ಡಿಯನ್ ವರದಿ ತಿಳಿಸಿದೆ.
ಅದರಲ್ಲಿ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳಿಗೆ ಕುಂದುಜ್, ಇಬ್ಬರಿಗೆ ಮಾಜಾರ್ ಇ ಶರೀಫ್ ಹಾಗೂ ಉಳಿದಿಬ್ಬರಿಗೆ ಫಾರ್‌ಯಾಬ್‌ನಲ್ಲಿ ದುಷ್ಕೃತ್ಯ ನಡೆಸಲು ಸೂಚಿಸಲಾಗಿತ್ತು ಎಂದು ವರದಿ ಹೇಳಿದೆ.
ಪ್ರತಿ ತಿಂಗಳಿಗೊಮ್ಮೆ ಈ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದು, ಸುಮಾರು 20 ಮಂದಿ ಭಾಗವಹಿಸುತ್ತಾರೆ. ಸಭೆ ಕ್ವೆಟ್ಟಾ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ ಎಂದು ವರದಿಯಲ್ಲಿ ಹೇಳಿದ್ದು, ಆ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ. ಈ ಸಭೆಯಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಓಮರ್, ಒಸಾಮಾ ಬಿನ್ ಲಾಡೆನ್, ಮುಲ್ಲಾ ದಾದುಲ್ಲಾ ಮತ್ತು ಮುಲ್ಲಾ ಬಾರಾದಾರ್ ಪಾಲ್ಗೊಳ್ಳುತ್ತಿದ್ದಾರೆ ಎಂದು ಬಹಿರಂಗಗೊಂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.