ಮದುವೆ ಛಾಯಾಚಿತ್ರಕಾರನೊಬ್ಬ ಅಚಾನಕ್ ಗುಂಡಿಗೆ ಬಲಿಯಾದ ಪ್ರಕರಣವಿದು. ಮದುವೆ ಗಂಡು-ಹೆಣ್ಣು ಬಂದೂಕಿನೊಂದಿಗೆ ಪೋಸ್ ನೀಡುತ್ತಿದ್ದುದನ್ನು ಕ್ಲಿಕ್ಕಿಸುತ್ತಿರುವಾಗ ಈ ಘಟನೆ ನಡಿದೆದ.
ಆಕಸ್ಮಿಕ ಗುಂಡಿಗೆ ಬಲಿಯಾದ ನತದೃಷ್ಟ ಫೋಟೋಗ್ರಾಫರ್ ಕಾಲೊಗೆರೋ ಸಿಮಿಯಾ (45) ಎಂದು ಗುರುತಿಸಲಾಗಿದೆ.
ವೆಲೆಂಟಿನಾ ಅನಿತ್ರಾ (22) ಮತ್ತು ಇಗ್ನಾಜಿಯೋ ಲಿಕೋಡಿಯಾ (25) ತಮ್ಮ ಹೆತ್ತವರೊಂದಿಗೆ ಇಟಲಿಯಲ್ಲಿನ ಮದುವೆ ಕಾರ್ಯಕ್ರಮದಲ್ಲಿರುವಾಗ ಈ ಘಟನೆ ನಡೆದಿದ್ದು, ತಕ್ಷಣವೇ ಕಾರ್ಯಕ್ರಮವನ್ನು ಅಮಾನತು ಮಾಡಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಸಿಸಿಲಿಯಲ್ಲಿನ ಪಾಲೆರ್ಮೋ ಸಮೀಪದ ಆಲ್ಟೋಪೋಂಟೆ ಚರ್ಚಿಗೆ ಹೊರಡಬೇಕೆನ್ನುವ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿತ್ತು.
ಯಾರೊಬ್ಬರಿಗೂ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬರೂ ಇದರಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಿಜಕ್ಕೂ ಇದೊಂದು ದುರಂತ. ವರ ಮತ್ತು ವಧುವಿನ ಅಚಾತುರ್ಯದಿಂದಾಗಿ ಇದು ನಡೆದಿದೆ ಎಂದು ನಗರದ ಉಪ ಮೇಯರ್ ತಿಳಿಸಿದ್ದಾರೆ.
ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ, ಬಂದೂಕನ್ನು ಹಿಡಿದು ನಿಂತುಕೊಂಡರೆ ಚೆನ್ನಾಗಿತ್ತು ಎಂದು ಛಾಯಾಚಿತ್ರಕಾರ ಹೇಳಿಕೊಂಡಿದ್ದ. ಅದರಂತೆ ವಧು-ವರರು ಗನ್ ಹಿಡಿದುಕೊಂಡು ನಿಂತಿದ್ದರು. ಆದರೆ ಆಕಸ್ಮಿಕವಾಗಿ ಅವರಿಬ್ಬರಲ್ಲಿ ಒಬ್ಬರ ಬಂದೂಕು ಸಿಡಿದಿತ್ತು. ಗುಂಡು ನೇರವಾಗಿ ಛಾಯಾಚಿತ್ರಕಾರನಿಗೆ ಬಿದ್ದ ಕಾರಣ ಅವರು ಸಾವನ್ನಪ್ಪಿದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.