ಅಫಘಾನಿಸ್ತಾನ ರಹಸ್ಯ ಯುದ್ಧ ದಾಖಲೆಗಳು ಬಹಿರಂಗವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ನಮ್ಮಲ್ಲಿ ಚರ್ಚೆ ನಡೆಯದ ಹೊಸ ವಿಚಾರಗಳೇನೂ ಅದರಲ್ಲಿ ಇರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಫಘಾನಿಸ್ತಾನದಲ್ಲಿನ ಯುದ್ಧಕ್ಕೆ ಸಂಬಂಧಪಟ್ಟ 92,000 ರಹಸ್ಯ ದಾಖಲೆಗಳನ್ನು 'ವೀಕಿಲೀಕ್' ವೆಬ್‌ಸೈಟಲ್ಲಿ ಬಹಿರಂಗಪಡಿಸಿತ್ತು. ಇದರಲ್ಲಿ ಪಾಕಿಸ್ತಾನದ ದ್ವಿಮುಖ ನೀತಿಗಳು ಬಹಿರಂಗಗೊಂಡಿದ್ದವು.
ಈ ಕುರಿತು ಮೊತ್ತ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷರು, ದಾಖಲೆಗಳು ಬಹಿರಂಗವಾಗಿರುವುದು ಆತಂಕಕಾರಿ ವಿಚಾರ. ಈ ಕುರಿತು ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.
ಅಫಘಾನಿಸ್ತಾನ ಕುರಿತು ಸಾರ್ವಜನಿಕ ಚರ್ಚೆಗಳಿಗೆ ನಾವು ಬಹಿರಂಗಪಡಿಸದ ಯಾವುದೇ ವಿಚಾರಗಳನ್ನು ಈಗ ಹೊರಗೆ ಬಂದಿರುವ ದಾಖಲೆಗಳು ಹೇಳುತ್ತಿಲ್ಲ ಎನ್ನುವುದು ವಾಸ್ತವ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ ಎಂದರು.
ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿನ ನಮ್ಮ ಪ್ರಯತ್ನಗಳನ್ನು ಬೆಂಬಲಿಸಲು ಅಗತ್ಯ ಹಣಕಾಸು ಸಹಕಾರಕ್ಕಾಗಿ ಮಸೂದೆಗಳನ್ನು ಅಂಗೀಕರಿಸುವಂತೆ ಈಗಾಗಲೇ ನಾನು ಸದನದ ನಾಯಕರನ್ನು ಒತ್ತಾಯಿಸಿದ್ದೇನೆ ಎಂದು ಶ್ವೇತಭವನದಲ್ಲಿ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದ ನಂತರ ಒಬಾಮಾ ಹೇಳಿದ್ದಾರೆ.