ಚೀನಾದ ಪೂರ್ವ ಭಾಗದ ಪ್ಲ್ಯಾಸ್ಟಿಕ್ ಮತ್ತು ಕೆಮಿಕಲ್ಸ್ ಫ್ಯಾಕ್ಟರಿಯ ಗ್ಯಾಸ್ ಪೈಪ್ ಲೈನ್ ಸೊರಿಕೆಯಿಂದ ಸಂಭವಿಸಿದ ಸ್ಫೋಟದಿಂದ 12 ಜನರು ಸಾವನ್ನಪ್ಪಿದ್ದು, 300 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ನಾನ್‌ಜಿಯಾಂಗ್ ನಗರದಲ್ಲಿನ ಪೈಪ್ ಲೈನ್ ಸ್ಫೋಟದಿಂದ ಉಂಟಾದ ಬೆಂಕಿಯಿಂದ ಫ್ಯಾಕ್ಟರಿ ಹಾಗೂ ಸಮೀಪದ ಕಟ್ಟಡಗಳಿಗೂ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಲ್ಲದೇ ಗಾಯಗೊಂಡಿರುವವರಿಗೆ ನೀಡಲು ರಕ್ತದ ಕೊರತೆ ಎದುರಾಗಿರುವುದರಿಂದ ರಕ್ತವನ್ನು ದಾನವಾಗಿ ಕೊಡುವಂತೆ ಆಸ್ಪತ್ರೆಯ ವೈದ್ಯರು ಮನವಿ ಮಾಡಿಕೊಂಡಿದ್ದಾರೆ.
ಸ್ಫೋಟದಲ್ಲಿ ಸುಮಾರು 12 ಜನರು ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ. ಈ ಮೊದಲು ಆರು ಮಂದಿ ಸಾವನ್ನಪ್ಪಿರುವುದಾಗಿ ಕ್ಸಿನ್‌ಹುವಾ ವರದಿ ವಿವರಿಸಿತ್ತು.
ಗ್ಯಾಸ್ ಪೈಪ್ ಲೈನ್ ಸ್ಫೋಟದ ಪರಿಣಾಮ ಎಷ್ಟಿತ್ತೆಂದರೆ ಸುಮಾರು 300 ಮೀಟರ್‌ವರೆಗಿನ ಮನೆ, ಕಟ್ಟಡಗಳ ಕಿಟಕಿ, ಬಾಗಿಲುಗಳು ಧ್ವಂಸಗೊಂಡಿದ್ದವು. ಸ್ಥಳೀಯ ಜನರು ಭೀತಿಯಿಂದ ಹೊರಗೋಡಿದ ಘಟನೆಯೂ ಈ ಸಂದರ್ಭದಲ್ಲಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.