ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪುತ್ರಿ ಚೆಲ್ಸಾ ಕ್ಲಿಂಟನ್ ವಿವಾಹ ಕಾರ್ಯಕ್ರಮಕ್ಕೆ ಹಾಲಿ ಅಧ್ಯಕ್ಷ ಬರಾಕ್ ಒಬಾಮಾಗೆ ಆಹ್ವಾನ ನೀಡಿಲ್ಲ ಎಂದು ಸ್ವತಃ ಬರಾಕ್ ಬಹಿರಂಗಪಡಿಸಿದ್ದಾರೆ.
ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿರುವ ಹಿಲರಿ ಕ್ಲಿಂಟನ್ ಪುತ್ರಿಯಾಗಿರುವ ಚೆಲ್ಸಾ ಅವರ ವಿವಾಹ ಕಾರ್ಯಕ್ರಮಕ್ಕೆ ತನಗೆ ಯಾವುದೇ ಆಮಂತ್ರಣ ನೀಡಿಲ್ಲ ಎಂದು ಅಧ್ಯಕ್ಷ ಬರಾಕ್ ಎಬಿಸಿ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮಗಳ ಮದುವೆಗೆ ಹಿಲರಿ ಮತ್ತು ಬಿಲ್ ನನ್ನನ್ನು ಆಹ್ವಾನಿಸಿಲ್ಲ ಎಂದು ತಿಳಿಯುತ್ತೇನೆ. ಆದರೆ ಹಿಲರಿ ದಂಪತಿಗಳ ಮಗಳ ಮದುವೆ ಒಳ್ಳೆಯ ರೀತಿಯಿಂದ ನಡೆಯಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿರುವುದಾಗಿ ಫೋಕ್ಸ್ ನ್ಯೂಸ್ ವರದಿ ಹೇಳಿದೆ.
ಅಲ್ಲದೆ, ಕ್ಲಿಂಟನ್ ಮಗಳ ಮದುವೆಗೆ ತನಗೆ ಆಹ್ವಾನ ನೀಡದಿರುವುದಕ್ಕೆ ಹಾಸ್ಯದ ಮೂಲಕ ಉತ್ತರಿಸಿದ ಅವರು, ಒಂದೇ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ಅಧ್ಯಕ್ಷರು ಭಾಗವಹಿಸುವುದು ನಿಮಗೆ ಬೇಕಾಗಿಲ್ಲ ಅಲ್ಲವೇ ಎಂದರು.
ಕ್ಲಿಂಟನ್ ಪುತ್ರಿಯ ಮದುವೆಗೆ ಮಾಜಿ ಉಪಾಧ್ಯಕ್ಷ ಅಲ್ ಗೋರೆ ಕೂಡ ಗೈರು ಹಾಜರಾಗುತ್ತಿರುವುದಾಗಿ ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಹೇಳಿದೆ. ಜುಲೈ 31ರಂದು ಕ್ಲಿಂಟನ್ ಪುತ್ರಿ ಚೆಲ್ಲಾ ಅವರ ವಿವಾಹ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಮಾರ್ಕ್ ಮೆಜ್‌ವಿನ್ಸಿಕಿ ಅವರ ಜೊತೆ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.