ನಾಸ್ತಿಕಳಾದರೂ ಚರ್ಚನ್ನು ಗೌರವಿಸುತ್ತೇನೆ: ಆಸೀಸ್ ಪ್ರಧಾನಿ
ಮೆಲ್ಬೋರ್ನ್, ಗುರುವಾರ, 29 ಜುಲೈ 2010( 17:50 IST )
ತಾನು ನಾಸ್ತಿಕಳಾಗಿರುವ ಹೊರತಾಗಿಯೂ ಚರ್ಚ್ ಮತ್ತು ಇತರ ಧಾರ್ಮಿಕ ಸಮುದಾಯಗಳನ್ನು ಗೌರವಿಸುವುದಾಗಿ ಆಸ್ಟ್ರೇಲಿಯಾದ ಮೊತ್ತ ಮೊದಲ ಮಹಿಳಾ ಪ್ರಧಾನಿ ಜೂಲಿಯಾ ಗಿಲಾರ್ಡ್ ತಿಳಿಸಿದ್ದಾರೆ.
ಆಗಸ್ಟ್ 21ರಂದು ನಡೆಯುವ ಚುನಾವಣೆಯಲ್ಲಿ ಗಿಲಾರ್ಡ್ ಅವರಿಗೆ ಕ್ರಿಶ್ಚಿಯನ್ನರು ಮತ ಹಾಕಬಾರದು ಎಂಬ ಪರ್ತ್ ಆರ್ಚ್‌ಬಿಷಪ್ ಬ್ಯಾರಿ ಹಿಕ್ಕಿ ಹೇಳಿದ್ದಕ್ಕೆ ಪ್ರಧಾನಿ ಪ್ರತಿಕ್ರಿಯಿ ನೀಡುತ್ತಿದ್ದರು.
ಕ್ಯಾಥೊಲಿಕ್ ಚರ್ಚ್ ಕಾರ್ಯನಿರ್ವಹಣೆ, ಮತ್ತು ಇತರ ಚರ್ಚುಗಳು ಹಾಗೂ ಸಮಾಜದ ಧಾರ್ಮಿಕ ಸಮುದಾಯಗಳ ಬಗ್ಗೆ ನನ್ನಲ್ಲಿ ಅಪಾರ ಗೌರವವಿದೆ. ನಾನು ಧಾರ್ಮಿಕ ಭಾವನೆಗಳನ್ನು ಗೌರವಿಸುವ ವ್ಯಕ್ತಿತ್ವವನ್ನು ಹೊಂದಿರುವವಳು ಎಂದು ಆಕೆ ಹೇಳಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ಈ ಕುರಿತು ನಾನು ಯಾವುದೇ ವಿವರಣೆಯನ್ನು ನೀಡಬೇಕಾಗಿಲ್ಲ. ನನ್ನ ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ. ಅದೇ ನಾನು ಧಾರ್ಮಿಕ ಸಂಸ್ಥೆಗಳೆಡೆ ಹೊಂದಿರುವ ಗೌರವವನ್ನು ಸೂಚಿಸುತ್ತದೆ ಎಂದು ಗಿಲಾರ್ಡ್ ಹೇಳಿದರು.
ತಾನು ಆಸ್ಟ್ರೇಲಿಯಾದ ಶಿಕ್ಷಣ ಮಂತ್ರಿಯಾಗಿದ್ದುದನ್ನು ಉಲ್ಲೇಖಿಸಿರುವ ಅವರು, ಆ ಸಂದರ್ಭದಲ್ಲಿ ಕ್ಯಾಥೊಲಿಕ್ ಶೈಕ್ಷಣಿಕ ಸಮುದಾಯದ ಜತೆ ಗೌರವಯುತವಾಗಿ ಕಾರ್ಯನಿರ್ವಹಿಸಿದ್ದೆ; ಅದೇ ಪ್ರಕಾರವಾಗಿ ನಾನು ಪ್ರಧಾನಿಯಾಗಿ ಮುಂದುವರಿಯಲಿದ್ದೇನೆ ಎಂದಿದ್ದಾರೆ.