ಸಂಶೋಧನೆಯೊಂದು ಬಹಿರಂಗಪಡಿಸಿರುವ ಸತ್ಯವಿದು. ಪುರುಷರ ಟಾಯ್ಲೆಟ್‌ನ ನೀರು ಹಾಯಿಸುವ ಗುಂಡಿಯಲ್ಲಿರುವುದಕ್ಕಿಂತ ಸರಾಸರಿ 18 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ಮೊಬೈಲ್ ಫೋನ್‌ನಲ್ಲಿರುತ್ತವಂತೆ!
ಒಂದು ಮೊಬೈಲ್ ಫೋನಿನಲ್ಲಿರುವ ಕೀಟಾಣುಗಳಿಂದ ಎಷ್ಟೆಲ್ಲ ತೊಂದರೆಯಾಗಬಹುದು ಎಂದರೆ ಅದರ ಮಾಲಕ ಗಂಭೀರ ಹೊಟ್ಟೆನೋವಿಗೆ ಒಳಗಾಗುವಷ್ಟು. ಈ ಬಗ್ಗೆ ಸಾಕಷ್ಟು ಮೊಬೈಲ್ ಫೋನುಗಳನ್ನು ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಿದ ನಂತರ ಈ ಮೇಲಿನ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ.
ಈ ಅಧ್ಯಯನವನ್ನು ನಡೆಸಿರುವುದು ಬ್ರಿಟನ್‌ನಲ್ಲಿ. ಅದರ ಪ್ರಕಾರ ದೇಶದ 6.3 ಕೋಟಿ ಮೊಬೈಲುಗಳಲ್ಲಿ 1.47 ಕೋಟಿ ಮೊಬೈಲುಗಳು ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಹುಟ್ಟು ಹಾಕುವ ಸಾಮರ್ಥ್ಯವನ್ನು ಹೊಂದಿವೆ.
ಮಾನವ ಮತ್ತು ಪ್ರಾಣಿಗಳ ಗುದದ್ವಾರದ ಕೆಳಭಾಗದಲ್ಲಿ ಕಂಡು ಬರುವ ಬ್ಯಾಕ್ಟೀರಿಯಾವೊಂದು ಅಶುದ್ಧವಾಗಿರುವ ಮೊಬೈಲಿನಲ್ಲಿ ಮನೆ ಮಾಡಿರುವ ಪ್ರಮಾಣ ಸರಾಸರಿ ಶೇ.39ರಷ್ಟು ಹೆಚ್ಚಿರುತ್ತದೆ.
ಇದು ನಾವು ಬ್ಯಾಕ್ಟೀರಿಯಾಗಳೊಂದಿಗೆ ಹೇಗೆ ನಮಗೆ ತಿಳಿಯದಂತೆ ಸಂಪರ್ಕಕ್ಕೆ ಬರುತ್ತೇವೆ ಎಂಬುದನ್ನು ತೋರಿಸುತ್ತದೆ. ಜನರ ಪ್ರಕಾರ ಟಾಯ್ಲೆಟ್‌ನ ಫ್ಲಶ್‌ಗಳು ಸಾಕಷ್ಟು ರೋಗಾಣುಗಳನ್ನು ಹೊಂದಿರಬಹುದು ಎಂದು ಮುಟ್ಟಲು ಹಿಂಜರಿಯುತ್ತಾರೆ. ಆದರೆ ವಾಸ್ತವದಲ್ಲಿ ಮೊಬೈಲ್ ಫೋನೊಂದು ಹೊಂದಿರುವುದಕ್ಕಿಂತ ಸಾಕಷ್ಟು ಕಡಿಮೆ ಬ್ಯಾಕ್ಟೀರಿಯಾಗಳು ಅದರಲ್ಲಿರುತ್ತವೆ ಎಂದು ಸಂಶೋಧಕ ಕೇರಿ ಸ್ಟಾನಾವೇ ವಿವರಣೆ ನೀಡಿದ್ದಾರೆ.
ಈ ಬಗ್ಗೆ ಜನ ಗಂಭೀರವಾಗಿ ಯೋಚಿಸಬೇಕು ಎಂದು ಸಲಹೆ ನೀಡಬೇಕು ಎಂದಿರುವ ಅವರು, ಗೆಳೆಯರಿಗೆ ಫೋಟೋ ತೋರಿಸುವ ನೆಪದಲ್ಲಿ ಮೊಬೈಲ್ ನೀಡಬೇಡಿ ಎಂದಿದ್ದಾರೆ.
ಪಾಯಿಖಾನೆಯೊಂದರ ಸೀಟಿಗಿಂತ (ಪಾಶ್ಚಾತ್ಯ ಟಾಯ್ಲೆಟ್) ಕೆಲವು ಕಂಪ್ಯೂಟರುಗಳ ಕೀಲಿಮಣೆಗಳಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳಿರುತ್ತವೆ ಎಂದು ಈ ಹಿಂದಿನ ಅಧ್ಯಯನವೊಂದು ತಿಳಿಸಿತ್ತು. ಇದೀಗ ಮೊಬೈಲ್ ಸರದಿ. ಹಾಗೆಂದು ಮೊಬೈಲನ್ನು ನೀರು ಹಾಕಿ ತೊಳೆಯಿರಿ ಎಂದು ಯಾರೂ ಸಲಹೆ ನೀಡಿಲ್ಲ!