ಭಾರತ, ಅಮೆರಿಕ ಪಾಕಿಸ್ತಾನಿಯರಿಗೆ ಶತ್ರು ರಾಷ್ಟ್ರ!: ಸಮೀಕ್ಷೆ
ವಾಷಿಂಗ್ಟನ್, ಶುಕ್ರವಾರ, 30 ಜುಲೈ 2010( 12:36 IST )
ಪಾಕಿಸ್ತಾನದ ಅಭಿವೃದ್ದಿಗಾಗಿ ಬಿಲಿಯನ್‌ಗಟ್ಟಲೇ ಆರ್ಥಿಕ ನೆರವು, ಭಯೋತ್ಪಾದನೆ ಕುರಿತ ಮಾಹಿತಿ ವಿನಿಮಯ ಸೇರಿದಂತೆ ಹಲವು ವಿಧದಲ್ಲಿ ಬೆಂಬಲ ನೀಡುತ್ತಿರುವ ಅಮೆರಿಕದ ವಿರುದ್ಧ ಹತ್ತರಲ್ಲಿ ಆರು ಪಾಕಿಸ್ತಾನಿಯರು ಅಮೆರಿಕ ವಿರೋಧಿ ದೃಷ್ಟಿಕೋನ ಹೊಂದಿದ್ದಾರೆಂಬ ಬಗ್ಗೆ ಪೆವ್ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆ ಬಹಿರಂಗಗೊಳಿಸಿದೆ.
ಪಾಕಿಸ್ತಾನದಲ್ಲಿ ಅಟ್ಟಹಾಸಗೈಯುತ್ತಿರುವ ಉಗ್ರರ ಹಿಡಿತದ ಬಗ್ಗೆ ಪಾಕಿಸ್ತಾನಿಯರು ಕಡಿಮೆ ಪ್ರಮಾಣದಲ್ಲಿ ಆತಂಕ ಹೊಂದಿದ್ದಾರೆಂಬ ಬಗ್ಗೆಯೂ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಆದರೆ ಬಹುತೇಕ ಪಾಕಿಸ್ತಾನಿಯರು ಅಮೆರಿಕದ ವಿರುದ್ಧವೇ ಇದ್ದಿರುವುದಾಗಿ ತಿಳಿಸಿದೆ.
ಅಷ್ಟೇ ಅಲ್ಲ ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಬೇಕಾಗಿದೆ ಎಂದು ಹೆಚ್ಚಿನ ಪಾಕಿಸ್ತಾನಿಯರು ಬಯಸಿದ್ದಾರೆ. ಆದರೆ ಬಹುತೇಕರು ಅಮೆರಿಕದ ವಿರುದ್ದ ಸಂಶಯಾಸ್ಪದ ನಿಲುವು ಹೊಂದಿದ್ದಾರೆ. ಅಲ್ಲದೆ, ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಅಮೆರಿಕದ ಪಡೆಯ ಶಾಮೀಲಾತಿಯನ್ನು ಪಾಕಿಸ್ತಾನಿಯರು ವಿರೋಧಿಸಿದ್ದಾರೆ.
ಹತ್ತು ಮಂದಿ ಪಾಕಿಸ್ತಾನಿಯರಲ್ಲಿ ಆರು ಮಂದಿ ಅಮೆರಿಕವನ್ನು ಶತ್ರು ಎಂದೇ ಪರಿಗಣಿಸಿದ್ದಾರೆ. ಹತ್ತರಲ್ಲಿ ಕೇವಲ ಒಬ್ಬರು ಮಾತ್ರ ಮಿತ್ರರಾಷ್ಟ್ರ ಎಂದು ಸಮೀಕ್ಷೆಯಲ್ಲಿ ಒಲವು ವ್ಯಕ್ತಪಡಿಸಿದ್ದಾರೆ.
ನೆರೆಯ ಭಾರತವೇ ಪಾಕಿಸ್ತಾನಕ್ಕೆ ದೊಡ್ಡ ಬೆದರಿಕೆಯ ರಾಷ್ಟ್ರವಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಇದೇನೂ ಅಚ್ಚರಿಯ ವಿಷಯವಲ್ಲದಿದ್ದರೂ ಕೂಡ, ಶೇ.53ರಷ್ಟು ಪಾಕಿಸ್ತಾನಿಯರು ಭಾರತದ ವಿರುದ್ಧ, ಶೇ.23ರಷ್ಟು ತಾಲಿಬಾನ್ ಹಾಗೂ ಶೇ.3ರಷ್ಟು ಅಲ್ ಖಾಯಿದಾ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದ ಶೇ.3 ಅಥವಾ ಒಂದರಷ್ಟು ಜನರು ಏನೂ ಅಭಿಪ್ರಾಯ ತಿಳಿಸಿಲ್ಲ ಎಂದು ವಿವರಿಸಿದೆ.