ವಲಸೆ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ದೇಶದಲ್ಲಿ ಕಾಯಂ ವಾಸಸ್ಥಳಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ದಕ್ಷಿಣ ಕೊರಿಯಾ ಮಹಿಳೆ ಜತೆ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಕೆನಡಾದ ಇಮಿಗ್ರೇಷನ್ ನ್ಯಾಯಾಧೀಶರಿಗೆ ಇಲ್ಲಿನ ಕೋರ್ಟ್ ಜೈಲುಶಿಕ್ಷೆ ವಿಧಿಸಿದೆ.
ದೇಶದ ಕಾಯಂ ನಿವಾಸಿಯಾಗುವ ಬಗ್ಗೆ ದಕ್ಷಿಣ ಕೊರಿಯಾದ ಜಿ ಹೈ ಕಿಮ್ 2006ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ತನ್ನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂಬ ಒತ್ತಡ ಹೇರಿದ ಆರೋಪದಲ್ಲಿ ಇಮಿಗ್ರೇಷನ್ ಜಡ್ಜ್ 51ರ ಹರೆಯದ ಸ್ಟೀವ್ ಎಲ್ಲಿಸ್‌ಗೆ ಕೋರ್ಟ್ 18 ತಿಂಗಳ ಕಾರಾಗೃಹವಾಸ ಶಿಕ್ಷೆ ನೀಡಿದೆ.
ಈ ಕಾಮುಕ ನ್ಯಾಯಾಧೀಶನ ಬೇಡಿಕೆ ಬಗ್ಗೆ ಕಿಮ್ (25) ತನ್ನ ಗೆಳೆಯನ ನೆರವಿನಿಂದ ಗುಟ್ಟಾಗಿ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ಅಂತೂ ನ್ಯಾಯ ನೀಡಬೇಕಿದ್ದ ನ್ಯಾಯಾಧೀಶ ಈಗ ಜೈಲುಕಂಬಿ ಎಣಿಸುವಂತಾಗಿದೆ.
ಕಾಯಂ ವಾಸಕ್ಕಾಗಿ 2006ರಲ್ಲಿ ಅರ್ಜಿ ಸಲ್ಲಿಸಿದಾಗ, ಜಡ್ಜ್ ಎಲ್ಲಿಸ್ ಟೋರಾಂಟೋ ರೆಸ್ಟೋರೆಂಟ್‌ವೊಂದರಲ್ಲಿ ಕಿಮ್ ಜೊತೆ ಮಾತನಾಡುತ್ತ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದ. ಹೀಗೆ ಎರಡು ಬಾರಿ ರೆಸ್ಟೋರೆಂಟ್‌ನಲ್ಲಿ ಜಡ್ಜ್ ಭೇಟಿಯಾಗಿ ಬೇಡಿಕೆ ಇಟ್ಟಿದ್ದ. ನಂತರ ಕಿಮ್, ತನ್ನ ಮಾಧ್ಯಮ ಟೆಕ್ನಿಕಲ್ ವಿಭಾಗದ ಗೆಳೆಯನ ಸಹಾಯದಿಂದ ಮೂರನೇ ಬಾರಿ ಭೇಟಿಯಾಗಿ ಲೈಂಗಿಕ ಕ್ರಿಯೆ ಬೇಡಿಕೆ ಬಗ್ಗೆ ಚಿತ್ರೀಕರಣ ನಡೆಸಿದ್ದಳು. ಇದೀಗ ಗೆಳೆಯ ಬ್ರಾಡ್ ಆತನ ಪತಿಯಾಗಿದ್ದಾನೆ.
51ರ ಹರೆಯದ ಜಡ್ಜ್, ಕೊರಿಯನ್ ಯುವತಿ ಜತೆ ತನ್ನ ಜೊತೆ ಮಲಗಲು ಬೇಡಿಕೆ ಇಟ್ಟಿರುವುದು ವೀಡಿಯೋದಲ್ಲಿ ದಾಖಲಾಗಿತ್ತು. ನಿನಗೊಬ್ಬ ಬಾಯ್‌ಫ್ರೆಂಡ್ ದೊರೆತ ಹಾಗೆ ಆಗುತ್ತೆ, ನನಗೆ ಹೆಂಡತಿ ಸಿಕ್ಕಂತಾಗುತ್ತದೆ. ನೀನು ನನ್ನೊಂದಿಗೆ ಇರಬೇಕೆಂದು ನಾನು ಹೇಳುತ್ತಿಲ್ಲ. ಅಷ್ಟೇ ಅಲ್ಲ ನಾನು ನಿನ್ನ ಪ್ರೀತಿಯ ಬಲೆಗೂ ಬೀಳಲ್ಲ ಎಂದು ಕಾಮುಕ ಜಡ್ಜ್ ಹಲುಬಿರುವುದು ವೀಡಿಯೋದಲ್ಲಿ ದಾಖಲಾಗುವ ಮೂಲಕ ನ್ಯಾಯಾಧೀಶನ ಬಣ್ಣ ಬಯಲಾಗಲು ಕಾರಣವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಥೇಯಾ ಹರ್ಮನ್, ಒಬ್ಬ ನ್ಯಾಯಾಧೀಶರಾಗಿ ಈ ರೀತಿ ನಡೆದುಕೊಂಡಿರುವುದು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುವಂತಹದ್ದಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿ, 18 ತಿಂಗಳ ಜೈಲು ಶಿಕ್ಷೆ ವಿಧಿಸಿದರು.