'ವೀಕಿಲೀಕ್ಸ್' ಬಹಿರಂಗಪಡಿಸಿರುವ ಅಫಘಾನಿಸ್ತಾನದಲ್ಲಿನ ಅಮೆರಿಕಾದ ಯುದ್ಧದ ಸ್ಫೋಟಕ ರಹಸ್ಯ ದಾಖಲೆಗಳಲ್ಲಿ ಹೆಸರಿಸಲಾದ ವ್ಯಕ್ತಿಗಳ ಶಿರಚ್ಛೇದನ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವುದಾಗಿ ತಾಲಿಬಾನ್ ಬೆದರಿಕೆ ಹಾಕಿದೆ.
92,000 ವರ್ಗೀಕೃತ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ್ದ ವೀಕಿಲೀಕ್ಸ್‌ನಿಂದಾಗಿ ಇದೀಗ ಭದ್ರತಾ ಬೆದರಿಕೆಯೂ ಕಾಣಿಸಿಕೊಂಡಿದೆ. ಅಫಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಯೋಧರ ದೇಶಗಳು ಈಗ ಅಪಾಯಕಾರಿ ಸನ್ನಿವೇಶವನ್ನು ಎದುರಿಸುವಂತಾಗಿದೆ ಎಂದು ವರದಿಗಳು ಹೇಳಿವೆ.
ವೀಕಿಲೀಕ್ಸ್ ದಾಖಲೆಯಲ್ಲಿ ತಾಲಿಬಾನ್ ವಿರೋಧಿ ಮಾಹಿತಿದಾರರ ಹೆಸರು ಮತ್ತು ಸ್ಥಳಗಳನ್ನು ಹೆಸರಿಸಲಾಗಿತ್ತು. ದಾಖಲೆ ಬಹಿರಂಗದ ನಂತರ ಮೊತ್ತ ಮೊದಲ ಬಾರಿಗೆ ಗುರುವಾರ ರಾತ್ರಿ ತಾಲಿಬಾನ್ ಪ್ರತಿಕ್ರಿಯೆ ನೀಡಿದೆ.
ತಾಲಿಬಾನ್ ವಿರೋಧಿಗಳನ್ನು ಹೇಗೆ ಶಿಕ್ಷಿಸಬೇಕು ಎಂದು ನಮಗೆ ಗೊತ್ತು. ಅವರ ತಲೆಯನ್ನು ಇಲ್ಲದಂತೆ ಮಾಡುವುದೇ ಅತ್ಯುತ್ತಮ ಶಿಕ್ಷೆ ಎಂದು ಇದೀಗ ಜಾಗತಿಕ ಭಯೋತ್ಪಾದಕ ಸಂಘಟನೆ ಹೇಳಿಕೊಂಡಿದೆ.
ಇದರಿಂದಾಗಿ ಕಾಬೂಲ್‌ನಲ್ಲಿರುವ ಬ್ರಿಟೀಷ್ ಅಧಿಕಾರಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವಗಳೀಗ ಅಪಾಯದಲ್ಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ವೀಕಿಲೀಕ್ಸ್ ಆವಾಂತರದಿಂದಾಗಿ ಹಲವರಿಗೆ ಆತಂಕವುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾವು ಈಗಲೂ ನಮ್ಮ ಕಾರ್ಯಾಚರಣೆಯಲ್ಲಿ ಮುಂದುವರಿಯುತ್ತಿದ್ದೇವೆ. ಆದರೆ ನಮ್ಮೊಂದಿಗೆ ಸಹಕಾರ ನೀಡುತ್ತಿರುವ ಕೆಲವು ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಇದು ಹಿನ್ನಡೆ ತಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದನ್ನು ಪತ್ರಿಕೆಯೊಂದು ಉಲ್ಲೇಖಿಸಿದೆ.
ದಾಖಲೆ ಬಹಿರಂಗಕ್ಕೆ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಸಂಪೂರ್ಣವಾಗಿ ಬೇಜವಾಬ್ದಾರಿಯುತ ಮತ್ತು ಆಘಾತಕಾರಿ ಎಂದು ಅವರು ಬಣ್ಣಿಸಿದ್ದಾರೆ.