12,000 ಉಗ್ರಗಾಮಿಗಳ ಸೇನೆಯನ್ನು ಸಿದ್ಧಪಡಿಸಿ ಭೂಮಿಯನ್ನು ಶುದ್ಧೀಕರಣಗೊಳಿಸುತ್ತೇವೆ ಎಂದು ಅಲ್‌ಖೈದಾದ ಯೆಮನ್ ವಿಭಾಗ ಬೆದರಿಕೆ ಹಾಕಿದೆ.
ಇಸ್ಲಾಮಿಕ್ ರಾಷ್ಟ್ರಕ್ಕಾಗಿ ನಾವೀಗ ಶುಭ ಸುದ್ದಿಯನ್ನು ನೀಡುತ್ತಿದ್ದೇವೆ. ಆಡೆನ್ ಮತ್ತು ಅಬ್ಯಾನ್‌ನಲ್ಲಿ 12,000 ಹೋರಾಟಗಾರರನ್ನೊಳಗೊಂಡ ಸೇನೆ ನಾವು ತರಬೇತಿ ನೀಡುತ್ತಿದ್ದೇವೆ ಎಂದು ಅಲ್‌ಖೈದಾದ ಅರೇಬಿಯನ್ ಪೆನಿನ್ಸುಲಾದ ಫೀಲ್ಡ್ ಕಮಾಂಡರ್ ಮೊಹಮ್ಮದ್ ಸೈಯದ್ ಅಲ್ ಒಂದಾ ಆಡಿಯೋ ಪೋಸ್ಟಿಂಗ್ ಮೂಲಕ ವೆಬ್‌ಸೈಟ್‌ವೊಂದರಲ್ಲಿ ತಿಳಿಸಿದ್ದಾನೆಂದು ಪತ್ರಿಕೆಯೊಂದು ವರದಿ ಮಾಡಿದೆ.
ಯೆಮನ್‌ನ ದಕ್ಷಿಣ ಪ್ರಾಂತ್ಯದ ಅಬ್ಯಾನ್ ಮತ್ತು ಬಂದರು ನಗರ ಆಡೆನ್‌ಗಳನ್ನು ಉಲ್ಲೇಖಿಸಿರುವ ಸೈಯದ್, ಈ ಸೇನೆಯನ್ನು ಬಳಸಿ ನಾವು ಇಸ್ಲಾಮಿಕ್ ಕಲೀಫ್ ರಾಷ್ಟ್ರವನ್ನು ಸ್ಥಾಪಿಸುತ್ತೇವೆ ಎಂದು ಹೇಳಿದ್ದಾನೆ.
ಇದು ಯೆಮನ್ ಸರಕಾರದ ಸುರಕ್ಷತಾ ಮತ್ತು ರಾಷ್ಟ್ರೀಯ ಭದ್ರತಾ ಸೇವಾ ವಿಭಾಗಕ್ಕೆ ನಾವು ನೀಡುತ್ತಿರುವ ಸಂದೇಶ. ನಮ್ಮ ಕತ್ತಿಗಳು ಸಿದ್ಧವಾಗಿವೆ. ಇದರೊಂದಿಗೆ ನಾವು ಭೂಮಿಯನ್ನು ಶುದ್ಧಗೊಳಿಸುತ್ತೇವೆ ಎಂದಿದ್ದಾನೆ.
ಯೆಮನ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸೈಯದ್, ಸರಕಾರವು ಅಮೆರಿಕಾ ನೇತೃತ್ವದ ಕ್ರೂಸೇಡರ್ ಮಿಲಿಟರಿಯೊಂದಿಗೆ ಕೈ ಜೋಡಿಸಿ ಅಮಾಯಕ ಮುಸ್ಲಿಮರನ್ನು ಕೊಂದು ಹಾಕಿದೆ. ಅಬ್ಯಾನ್ ಮತ್ತು ಮರೀಬ್‌ಗಳಲ್ಲಿನ ಮುಸ್ಲಿಮರ ಮನೆಗಳನ್ನು ಮತ್ತು ಮಸೀದಿಗಳನ್ನು ಧ್ವಂಸ ಮಾಡಿದೆ ಎಂದಿದ್ದಾನೆ.