1975ರಲ್ಲಿ ಅಮೆರಿಕಾ ಪ್ರವಾಸಿ ಕೋನಿ ಜೋ ಬ್ರೊಂಜಿಚ್ ಅವರನ್ನು ಕೊಲೆಗೈದ ಪ್ರಕರಣದಲ್ಲಿ 'ಬಿಕಿನಿ ಕಿಲ್ಲರ್' ಚಾರ್ಲ್ಸ್ ಶೋಭರಾಜ್ ದೋಷಿ ಎಂದು ನೇಪಾಳ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
35 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಆರು ವರ್ಷಗಳ ಹಿಂದೆಯೇ ಶೋಭರಾಜ್‌ಗೆ ನೇಪಾಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಅದರ ವಿರುದ್ಧ ಆರೋಪಿ ಮೇಲ್ಮನವಿ ಸಲ್ಲಿಸುತ್ತಾ ಬಂದಿದ್ದು, ಇದೀಗ ಮೂರನೇ ಮೇಲ್ಮನವಿಯಲ್ಲೂ ಶೋಭರಾಜ್‌ಗೆ ಸೋಲಾಗಿದೆ.
ಈ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಾಲಯವು ಕೊನೆಗೂ ತೀರ್ಪು ನೀಡಿದೆ. ಶೋಭರಾಜ್ ತಪ್ಪಿತಸ್ಥ ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಆತನ ಪತ್ನಿ ನಿಹಿತಾ ಬಿಸ್ವಾಸ್ ನೇಪಾಳ ನ್ಯಾಯಾಂಗ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾಳೆ.
ನೇಪಾಳ ನ್ಯಾಯಾಂಗವು ಭ್ರಷ್ಟಾಚಾರ ಪೂರಿತವಾಗಿದೆ. ಅದು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ತೀರ್ಪನ್ನು ಇಲ್ಲಿಗೆ ನಾನು ಬಿಡುವುದಿಲ್ಲ ಎಂದು ಬಿಸ್ವಾಸ್ ಸವಾಲು ಹಾಕಿದ್ದಾಳೆ.
ಅಮೆರಿಕಾ ಪ್ರವಾಸಿಯನ್ನು ಹಲವಾರು ಬಾರಿ ಇರಿದು ಕೊಲೆ ಮಾಡಿದ್ದ ಶೋಭರಾಜ್, ದೇಹವನ್ನು ಬಹುತೇಕ ಸುಟ್ಟು ಹಾಕಿದ ನಂತರ ಕಾಠ್ಮಂಡು ಹೊರವಲಯದಲ್ಲಿ ಎಸೆದಿತ್ತ. ಈ ಪ್ರಕರಣದಲ್ಲಿ 2004ರಲ್ಲಿ ಶೋಭರಾಜ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಏಷಿಯಾದಾದ್ಯಂತ ಎಪ್ಪತ್ತರ ದಶಕದಲ್ಲಿ ಸರಣಿ ಕೊಲೆಗಳನ್ನು ನಡೆಸಿದ್ದ ಈತನಿಗೆ 'ಸರ್ಪ', 'ಬಿಕಿನಿ ಕಿಲ್ಲರ್' ಮುಂತಾದ ಅಡ್ಡ ಹೆಸರುಗಳಿವೆ. ವಿಷ ಉಣ್ಣಿಸಿ ಕೊಲೆ ಮಾಡುವುದು, ದರೋಡೆ ಮಾಡುವುದು ಮುಂತಾದ ಹತ್ತು ಹಲವು ಅಪರಾಧಿ ಕೃತ್ಯಗಳನ್ನು ನಡೆಸುತ್ತಿದ್ದರೂ, ನ್ಯಾಯಾಂಗದ ಕಣ್ಣಿಗೆ ಇದುವರೆಗೆ ಮಣ್ಣೆರಚುತ್ತಾ ಬಂದಿದ್ದ.
ಹತ್ಯಾ ಪ್ರಕರಣವೊಂದರಲ್ಲಿ ಶೋಭರಾಜ್ ಭಾರತದಲ್ಲಿ 21 ವರ್ಷಗಳ ಜೈಲು ವಾಸವನ್ನು ಅನುಭವಿಸಿದ್ದ.