ಪಾಕಿಸ್ತಾನದ ಹಾಲಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಕ್ಕಿಂತ ಆರ್ಮಿ ವರಿಷ್ಠ ಜನರಲ್ ಅಶ್ಫಾಕ್ ಕಯಾನಿಯೇ ಹೆಚ್ಚು ಜನಪ್ರಿಯ ವ್ಯಕ್ತಿಯಾಗಿದ್ದಾರೆಂದು ಹೊಸ ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. ಸಮೀಕ್ಷೆ ಪ್ರಕಾರ ಪ್ರತಿ ಐದು ಮಂದಿ ಪಾಕಿಸ್ತಾನಿಯರಲ್ಲಿ ಓರ್ವ ಮಾತ್ರ ಜರ್ದಾರಿ ಪರ ಒಲವು ವ್ಯಕ್ತಪಡಿಸಿದ್ದಾರೆ.
ಕೇವಲ ಶೇ.20ರಷ್ಟು ಪಾಕಿಸ್ತಾನಿಯರು ಮಾತ್ರ ಜರ್ದಾರಿ ಪರ ಒಲವು ವ್ಯಕ್ತಪಡಿಸಿರುವುದಾಗಿ ಪೆವ್ ಗ್ಲೋಬಲ್ ಆಟಿಟ್ಯೂಡ್ಸ್ ಪ್ರೊಜೆಕ್ಟ್ ನಡೆಸಿದ ಸಮೀಕ್ಷೆಯಿಂದ ಹೊರಬಿದ್ದಿದೆ. ಇದು ಕಳೆದ ಎರಡು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆತೆಗಿಂತ ಶೇ.64ರಷ್ಟು ಕುಸಿತ ಕಂಡಿದೆ.
ಪ್ರಸಕ್ತವಾಗಿ ನಡೆಸಿದ ನೂತನ ಸಮೀಕ್ಷೆಯಲ್ಲಿ ಮಿಲಿಟರಿ ಮುಖ್ಯಸ್ಥ ಕಯಾನಿ ಪರವಾಗಿ ಶೇ.61ರಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಜರ್ದಾರಿ ಬದ್ಧವೈರಿ ಎಂದೇ ಪರಿಗಣಿತವಾಗಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಶೇ.71ರಷ್ಟು ಜನ ಒಲವು ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಎರಡನೇ ಬಾರಿ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎಂದೇ ಪಾಕಿಸ್ತಾನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬರಾಕ್ ಪರ ಶೇ.8ರಷ್ಟು ಪಾಕಿಸ್ತಾನಿಯರು ಒಲವು ತೋರಿದ್ದಾರೆ. ನೆರೆಯ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮಿಲಿಟರಿ ಪಡೆ ಉಗ್ರರ ವಿರುದ್ಧ ನಡೆಸುತ್ತಿರುವ ಹೋರಾಟದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶೇ.65ರಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.