ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬನ್ನಿ...ಸೆ.11ರಂದು ಕುರಾನ್‌ಗೆ ಬೆಂಕಿ ಹಚ್ಚುವ: ಚರ್ಚ್ ಕರೆ! (US church | burn Quran | Sept 11 | Christians | Muslims | terror attack,)
ಬನ್ನಿ...ಸೆ.11ರಂದು ಕುರಾನ್‌ಗೆ ಬೆಂಕಿ ಹಚ್ಚುವ: ಚರ್ಚ್ ಕರೆ!
ನ್ಯೂಯಾರ್ಕ್, ಶನಿವಾರ, 31 ಜುಲೈ 2010( 13:52 IST )
ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11ರಂದು ಉಗ್ರರು ನಡೆಸಿದ ಭಯೋತ್ಪಾದನಾ ದಾಳಿಯ ವಾರ್ಷಿಕೋತ್ಸವದ ಅಂಗವಾಗಿ 'ಮುಸ್ಲಿಮರ ಪವಿತ್ರ ಗ್ರಂಥವಾಗಿರುವ ಕುರಾನ್‌ಗೆ ಬೆಂಕಿ ಹಚ್ಚಿ' ಪ್ರತಿಭಟನೆ ನಡೆಸಲು ಅಮೆರಿಕ ಫ್ಲೋರಿಡಾದ ಚರ್ಚ್‌ವೊಂದು ಯೋಜನೆ ಸಿದ್ದಪಡಿಸುತ್ತಿದೆ. ಆದರೆ ಈ ನಿಲುವಿನ ವಿರುದ್ಧ ಅನೇಕ ಕ್ರಿಶ್ಚಿಯನ್ ಹಾಗೂ ಮುಸ್ಲಿಮ್ ರಾಷ್ಟ್ರಗಳು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿವೆ.
9/11ರ ಉಗ್ರರ ದಾಳಿಯಲ್ಲಿ ಮಡಿದವರ ಸ್ಮರಣಾರ್ಥವಾಗಿ ಕುರಾನ್ ಸುಡಲು ಫ್ಲೋರಿಡಾದ ಚರ್ಚ್ ನಿರ್ಧರಿಸಿದೆ. ಅಲ್ಲದೆ ವಂಚಕ ಹಾಗೂ ಪೈಶಾಚಿಕ ಇಸ್ಲಾಮ್ ಧರ್ಮದ ವಿರುದ್ಧ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದೆ.
9/11ರ ಘಟನೆಯನ್ನು ಖಂಡಿಸುವ ನಿಟ್ಟಿನಲ್ಲಿ ಮುಸ್ಲಿಮರ ಪವಿತ್ರ ಧರ್ಮಗ್ರಂಥ ಕುರಾನ್ ಅನ್ನು ಚರ್ಚ್‌ನ ಆವರಣದಲ್ಲಿ ಸೆಪ್ಟೆಂಬರ್ 11ರ ಬೆಳಿಗ್ಗೆ 6ರಿಂದ 9 ಗಂಟೆ ತನಕ ಸುಡಲು ಕ್ರಿಶ್ಚಿಯನ್‌ರು ಆಗಮಿಸಬೇಕೆಂದು ಚರ್ಚ್ ತನ್ನ ವೆಬ್‌ಸೈಟ್ ಹಾಗೂ ಫೇಸ್‌ಬುಕ್ ಮೂಲಕ ಪ್ರಚಾರಾಂದೋಲನ ಕೈಗೊಂಡಿದೆ.
'ಇಸ್ಲಾಮ್ ಪೈಶಾಚಿವಾದದ್ದು ಎಂದು ನಾವು ನಂಬಿದ್ದೇವೆ. ಹಾಗಾಗಿ ಲಕ್ಷಾಂತರ ಅಮಾಯಕ ಜನರು ಸಾವನ್ನಪ್ಪುವಂತಾಗಿದೆ. ಇದೊಂದು ವಂಚಕ ಧರ್ಮ, ಹಿಂಸಾಪ್ರಚೋದಕ ಧರ್ಮ. ಇದನ್ನು ಇಸ್ಲಾಮ್ ಧರ್ಮ ಸಾಕಷ್ಟು ಸಂದರ್ಭದಲ್ಲಿ ಸಾಬೀತುಪಡಿಸಿದೆ' ಎಂದು ಚರ್ಚ್ ಪ್ಯಾಸ್ಟರ್ ಟೆರ್ರಿ ಜೋನ್ಸ್ ತಿಳಿಸಿರುವುದಾಗಿ ಸಿಎನ್ಎನ್ ವರದಿ ಹೇಳಿದೆ.
ಇದೀಗ ಕುರಾನ್ ಸುಡುವ ಚರ್ಚ್‌ನ ಕರೆಗೆ ಫೇಸ್‌ಬುಕ್ ಪೇಜ್‌ನಲ್ಲಿ ಈಗಾಗಲೇ 1,600ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಸೆಪ್ಟೆಂಬರ್ 11ರಂದು ಕುರಾನ್ ಅನ್ನು ಆ ಸ್ಥಳದಲ್ಲಿ ಇಟ್ಟು ಬೆಂಕಿ ಹಚ್ಚುವುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕುರಾನ್ ಸುಡುವ ಪ್ರಚಾರಾಂದೋಲನಕ್ಕಾಗಿ ಚರ್ಚ್ ಯೂ ಟ್ಯೂಬ್ ವೀಡಿಯೋವನ್ನು ಕೂಡ ಬಳಸಿಕೊಂಡಿದೆ.
ಇಸ್ಲಾಮ್ ಧರ್ಮದ ಕ್ರೂರತೆಯ ಬಗ್ಗೆ ಯೂ ಟ್ಯೂಬ್ ವೀಡಿಯೋದಲ್ಲಿ ಕಿಡಿಕಾರಿರುವ ಜೋನ್ಸ್, ಇಸ್ಲಾಮ್ ಪೈಶಾಚಿಕ ಧರ್ಮ ಎಂಬ ತಲೆಬರಹದ ಪುಸ್ತಕವನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರೆ. ಏತನ್ಮಧ್ಯೆ, ಕುರಾನ್ ಸುಡುವಿಕೆ ಕಾರ್ಯಕ್ರಮದ ವಿರುದ್ಧ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಒಂದು ವೇಳೆ ಸೆಪ್ಟೆಂಬರ್ 11ರಂದು ಕುರಾನ್ ಅನ್ನು ಬೆಂಕಿ ಹಚ್ಚಿ ಸುಟ್ಟರೆ, ಇದರ ಪರಿಣಾಮ ಜಗತ್ತಿನಾದ್ಯಂತ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮದ ನಡುವೆ ಹಿಂಸಾಚಾರ ಭುಗಿಲೇಳಲಿದೆ ಎಂದು ನ್ಯಾಷನಲ್ ಅಸೋಸಿಯೇಷನ್ ಇವೆಂಜಿಕಲ್ಸ್ ಎಚ್ಚರಿಕೆ ಕೂಡ ನೀಡಿದೆ. ಆ ನಿಟ್ಟಿನಲ್ಲಿ ಕುರಾನ್ ಸುಡುವಿಕೆ ಪ್ರತಿಭಟನೆ ಕೈಬಿಡಬೇಕೆಂದು ಆಗ್ರಹಿಸಿದೆ.