ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವುದರಲ್ಲಿ ಮುಂದಡಿಯಿಡುತ್ತಿರುವ ರಾಷ್ಟ್ರಗಳಲ್ಲಿ ಪ್ರಮುಖವಾಗಿರುವ ಇರಾನ್, ಓರ್ವ ಅತ್ಯಾಚಾರಿ ಮತ್ತು ಮೂವರು ಡ್ರಗ್ಸ್ ಕಳ್ಳ ಸಾಗಣೆದಾರರನ್ನು ನೇಣಿಗೆ ಹಾಕಿದೆ ಎಂದು ವರದಿಗಳು ಹೇಳಿವೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ದೋಷಿಯೆಂದು ತೀರ್ಪು ಪಡೆದುಕೊಂಡಿರುವ ಯೂಸೆಫ್ ಫಾರ್ದಿ ಎಂಬಾತನನ್ನು ಖ್ವಾಜ್ವಿನ್ ನಗರದಲ್ಲಿ ಗುರುವಾರ ಗಲ್ಲಿಗೆ ಹಾಕಲಾಗಿದೆ.
ಇತರ ಮೂವರ ಹೆಸರು ಸಂಕ್ಷಿಪ್ತ ರೂಪದಲ್ಲಿ ಮಾತ್ರ ಲಭ್ಯವಿದೆ. ಎ.ಎ., ಎಸ್.ಜೆಡ್. ಮತ್ತು ಎಸ್.ಎಂ. ಎಂಬ ಮೂವರನ್ನು ಕುಜೆಸ್ತಾನ್ ಪ್ರಾಂತ್ಯದ ಅಹ್ವಾಜ್ ನಗರದಲ್ಲಿ ನೇಣುಗಂಬಕ್ಕೇರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಇವರುಗಳು ಮಾದಕ ದ್ರವ್ಯ ಕಳ್ಳ ಸಾಗಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಕ್ಕಾಗಿ ಜುಲೈ 24ರಂದು ಗಲ್ಲಿಗೇರಿಸಲಾಗಿದೆ.
ಇದರೊಂದಿಗೆ ಇರಾನ್ ಪ್ರಸಕ್ತ ವರ್ಷ ಗಲ್ಲಿಗೇರಿಸಿದ ವ್ಯಕ್ತಿಗಳ ಸಂಖ್ಯೆ 97ಕ್ಕೇರಿದೆ. ಕಳೆದ ವರ್ಷ ಕನಿಷ್ಠ 270 ಮಂದಿಯನ್ನು ಇರಾನ್ ವಿವಿಧ ಕಾರಣಗಳಿಗಾಗಿ ನೇಣಿಗೆ ಹಾಕಿತ್ತು.
ಇರಾನ್ ಕಾನೂನುಗಳ ಪ್ರಕಾರ ಕೊಲೆ, ಅತ್ಯಾಚಾರ, ದರೋಡೆ, ಮಾದಕ ದ್ರವ್ಯ ಕಳ್ಳ ಸಾಗಾಟ ಮತ್ತು ವ್ಯಭಿಚಾರಗಳು ಸಾಬೀತುಗೊಂಡಲ್ಲಿ ಮರಣ ದಂಡನೆ ವಿಧಿಸಬಹುದಾಗಿದೆ.