ಇತ್ತೀಚೆಗಷ್ಟೇ ಪತನಗೊಂಡಿದ್ದ ಪಾಕಿಸ್ತಾನ ವಿಮಾನದ ಕೊನೆಯ ಹಂತದ ಪ್ರಕ್ರಿಯೆಗಳನ್ನು ದಾಖಲಿಸಿಕೊಂಡಿರುವ ಬ್ಲ್ಯಾಕ್ ಬಾಕ್ಸನ್ನು ರಕ್ಷಣಾ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ, ಆದರೆ ಅದರ ಸ್ಥಿತಿಯ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಬುಧವಾರದಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಕರಾಚಿಯಿಂದ ತೆರಳುತ್ತಿದ್ದ 'ಏರ್ ಬ್ಲೂ' ಕಂಪನಿಯ ಖಾಸಗಿ ವಿಮಾನ ಮರ್ಗಲ್ಲಾ ಬೆಟ್ಟದಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ 152 ಮಂದಿಯೂ ಸಾವನ್ನಪ್ಪಿದ್ದರು.
ಮರ್ಗಲ್ಲಾ ಬೆಟ್ಟ ಪ್ರದೇಶ ದಟ್ಟಾರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿಗೆ ತೆರಳಲು ಸರಿಯಾದ ರಸ್ತೆ ಸಂಪರ್ಕವೂ ಇಲ್ಲ. ಜತೆಗೆ ಭಾರೀ ಮಳೆ ಕೂಡ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಬಳಿಕ ಬ್ಲ್ಯಾಕ್‌ಬಾಕ್ಸ್ ಪತ್ತೆಗೂ ಇದೇ ರೀತಿ ತೊಂದರೆಯಾಗಿತ್ತು. ಆದರೂ ಸಿಬ್ಬಂದಿಗಳು ಕಠಿಣ ಶ್ರಮವಹಿಸಿ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲ್ಯಾಕ್‌ಬಾಕ್ಸನ್ನು ವಾಯುಯಾನ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ರಾಜಧಾನಿ ಅಭಿವೃದ್ಧಿ ಪ್ರಾಧಿಕಾರದ ವಕ್ತಾರ ರಂಜಾನ್ ಸಾಜಿದ್ ತಿಳಿಸಿದ್ದಾರೆ.
ಏರ್‌ಬಸ್ ಎ321 ಮಾದರಿಯ ವಿಮಾನವನ್ನು ಇಸ್ಲಾಮಾಬಾದ್‌ನಲ್ಲಿ ನಾಜೂಕಿನಿಂದ ಇಳಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಅದಕ್ಕೂ ಮೊದಲು ವಿಮಾನವು ಪತನಗೊಂಡಿತ್ತು. ಇದಕ್ಕೆ ಕಾರಣವೇನು ಎಂಬುದು ಬ್ಲ್ಯಾಕ್‌ಬಾಕ್ಸ್‌ನಿಂದ ತಿಳಿಯುವ ಭರವಸೆಯಿದೆ ಎಂದು ಮೂಲಗಳು ಹೇಳಿವೆ.