ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದ ಏಳು ಶಂಕಿತ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ತಡೆ ನ್ಯಾಯಾಲಯ, ಪ್ರಮುಖ ಆರೋಪಿ ಹಾಗೂ ಲಷ್ಕರ್ ಇ ತೋಯ್ಬಾ ಕಮಾಂಡರ್ ಝಾಕೀರ್ ರೆಹಮಾನ್ ಲಖ್ವಿ ಜಾಮೀನು ಅರ್ಜಿಯ ತೀರ್ಪನ್ನು ಆಗಸ್ಟ್ ಏಳಕ್ಕೆ ಕಾಯ್ದಿರಿಸಿದೆ.
ರಾವಲ್ಪಿಂಡಿಯಲ್ಲಿನ ಭಾರೀ ಭದ್ರತೆಯ ಆಡಿಯಾಲಾ ಜೈಲಿನಲ್ಲಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ನಡೆಸುತ್ತಿದ್ದು, ಲಖ್ವಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ ತೀರ್ಪನ್ನು ಕಾಯ್ದಿರಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಲಖ್ವಿ ಮುಂಬೈ ದಾಳಿ ರೂವಾರಿ ಎಂದು ಪಾಕಿಸ್ತಾನಿ ತನಿಖಾ ದಳಗಳು ನ್ಯಾಯಾಲಯಕ್ಕೆ ತಿಳಿಸಿದ್ದು, ಆತನ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಇರುವುದರಿಂದ ಜಾಮೀನು ನೀಡಬಾರದು ಎಂದು ಸರಕಾರಿ ವಕೀಲರು ವಾದಿಸಿದ್ದಾರೆ.
ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಲಖ್ವಿ ವಕೀಲರು, ಪಾಕಿಸ್ತಾನ ತೋರಿಸುತ್ತಿರುವ ಪುರಾವೆಗಳು ಭಾರತೀಯ ಭದ್ರತಾ ಪಡೆಗಳು ಸಂಗ್ರಹಿಸಿರುವುದನ್ನು. ಪಾಕ್ ಏಜೆನ್ಸಿಗಳಲ್ಲಿ ಯಾವುದೇ ನೇರ ಸಾಕ್ಷ್ಯಗಳಿಲ್ಲ ಎಂದಿದ್ದಾರೆ.
2008ರ ಮುಂಬೈ ದಾಳಿಯಲ್ಲಿ ಲಖ್ವಿ ಪಾಲ್ಗೊಂಡಿಲ್ಲ. ಅಂತಹ ಯಾವುದೇ ಪ್ರಕರಣದಲ್ಲಿ ಆತ ಈ ಹಿಂದೆಯೂ ಪಾಲ್ಗೊಂಡಿಲ್ಲ. ಲಖ್ವಿ ಸಚ್ಚಾರಿತ್ರ್ಯ ಹೊಂದಿದ್ದಾನೆ ಎಂದು ವಕೀಲರು ವಾದಿಸಿದ್ದಾರೆ.
ಭಾರತ ಮತ್ತು ಇತರ ದೇಶಗಳ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಲಖ್ವಿ ಮತ್ತು ಇತರ ಆರು ಮಂದಿಯ ಮೇಲೆ ಕೇಸುಗಳನ್ನು ಹಾಕಿದೆಯೇ ಹೊರತು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಅಂಶಗಳನ್ನು ಪರಿಗಣಿಸಿ ಲಖ್ವಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.