ಮಾದಕ ದ್ರವ್ಯ ಕಳ್ಳಸಾಗಾಣೆ ಆರೋಪದ ಮೇಲೆ ಸೆರೆ ಸಿಕ್ಕ ಭಾರತೀಯ ಮೂಲದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ ದಂಡ ವಿಧಿಸಿದ್ದು, ಒಂದು ವೇಳೆ ದಂಡ ಪಾವತಿಸಲು ವಿಫಲವಾದ್ರೆ ದೀರ್ಘಕಾಲ ಜೈಲುಶಿಕ್ಷೆ ಅನುಭವಿಸಲು ಸಿದ್ದವಾಗಬೇಕು ಎಂದು ಇಲ್ಲಿನ ಕೋರ್ಟ್ ತೀರ್ಪು ನೀಡಿದೆ.
ಭಾರತೀಯ ಮೂಲದ ಡ್ರಗ್ ಸ್ಮಗ್ಲರ್ ಕುಲದೀಪ್ ಸಿಂಗ್ ಹೆರ್ಯೆಗೆ ಇಲ್ಲಿನ ಬರ್ಮಿಂಗ್ ಹ್ಯಾಮ್ ಕೋರ್ಟ್ ಆರು ವರ್ಷಗಳ ಜೈಲುಶಿಕ್ಷೆ ಹಾಗೂ 185,000 ಪೌಂಡ್ಸ್ ದಂಡ ವಿಧಿಸಿದೆ.
ಅಲ್ಲದೆ, ಒಂದು ವೇಳೆ ಆರು ತಿಂಗಳೊಳಗೆ ದಂಡ ಪಾವತಿಸಲು ಆರೋಪಿ ವಿಫಲನಾದರೆ ಹೆಚ್ಚುವರಿ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ಈ ಮೊದಲು ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಡ್ರಗ್ಸ್ ಮಾಫಿಯಾ ಗ್ಯಾಂಗ್‌ನಲ್ಲಿ ಶಾಮೀಲಾಗಿದ್ದ ಪಾಲ್‌ದೀಪ್ ಸಿಂಗ್ ಮಹಂಗರ್ ಮತ್ತು ಜಸ್ವೀರ್ ಸಿಂಗ್ ಭಾತಾಲ್‌ಗೆ ಕೂಡ ದಂಡ ವಿಧಿಸುವಂತೆ ಆದೇಶ ನೀಡಿತ್ತು. ಇದರಲ್ಲಿ ಪಾಲ್‌ದೀಪ್‌ಗೆ 550,000 ಪೌಂಡ್ಸ್ ದಂಡ ಅಥವಾ ಒಂಬತ್ತು ವರ್ಷಗಳ ಜೈಲುಶಿಕ್ಷೆ. ಜಸ್ವೀರ್‌ಗೆ 34,297 ಪೌಂಡ್ಸ್ ದಂಡ ವಿಧಿಸಿ ತೀರ್ಪು ನೀಡಿತ್ತು.