ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಪುತ್ರಿ ಚೆಲ್ಸಾ ಕ್ಲಿಂಟನ್ ವಿವಾಹದ ಬಗ್ಗೆ ಎದ್ದಿದ್ದ ಗುಲ್ಲುಗಳಿಗೆ ಕೊನೆಗೂ ತೆರೆ ಬಿದ್ದಿದೆ. ಚೆಲ್ಸಾ ತನ್ನ ಬಹುಕಾಲದ ಗೆಳೆಯ ಮಾರ್ಕ್ ಮೆಜ್ವಿಂಸ್ಕಿ ಜತೆ ದಾಂಪತ್ಯ ಜೀವನಕ್ಕೆ ಶನಿವಾರ ಪ್ರವೇಶಿಸಿದ್ದಾರೆ ಎಂದು ಕ್ಲಿಂಟನ್ ಕುಟುಂಬ ತಿಳಿಸಿದೆ.
ಆಸ್ಟರ್ ಕೋರ್ಟ್‌ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಚೆಲ್ಸಾ ಮತ್ತು ಮಾರ್ಕ್ ತಮ್ಮ ಕುಟುಂಬ ಮತ್ತು ಆಪ್ತ ಗೆಳೆಯರ ಎದುರು ವಿವಾಹವಾಗಿದ್ದಾರೆ ಎಂದು ಕ್ಲಿಂಟನ್ ಕುಟುಂಬ ಹೇಳಿಕೆ ನೀಡಿದೆ.
ಅವರು ಸಹ ಜೀವನವನ್ನು ಆರಂಭಿಸಲು ಇನ್ನಷ್ಟು ಒಳ್ಳೆಯ ದಿನಕ್ಕಾಗಿ ಕಾಯಬೇಕೆಂದು ನಾವು ಬಯಸಿರಲಿಲ್ಲ. ಮಾರ್ಕ್‌ನನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ ಎಂದು ಚೆಲ್ಸಾ ಹೆತ್ತವರು ತಿಳಿಸಿದ್ದಾರೆ.
ಹಾಲಿವುಡ್ ಖ್ಯಾತ ನಟ ಸ್ಟೀವನ್ ಸ್ಪೀಲ್‌ಬರ್ಗ್, ಖ್ಯಾತ ವಿನ್ಯಾಸಗಾರ್ತಿ ವೆರಾ ವಾಂಗ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಮಾಡೆಲೀನ್ ಅಲ್‌ಬ್ರೈಟ್ ಸೇರಿದಂತೆ ಸುಮಾರು 500 ಮಂದಿ ಗಣ್ಯರು ತೀರಾ ಖಾಸಗಿಯಾಗಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ವರದಿಗಳು ಹೇಳಿವೆ.
ಕ್ಲಿಂಟನ್ ದಂಪತಿಯ ಏಕೈಕ ಪುತ್ರಿ 30ರ ಹರೆಯದ ಚೆಲ್ಸಾ 32ರ ಮಾರ್ಕ್‌ನನ್ನು 90ರ ದಶಕದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮೊದಲ ಸಾರಿ ಭೇಟಿಯಾಗಿದ್ದರು. 2005ರಲ್ಲಿ ಆತನ ಜತೆ ಡೇಟಿಂಗ್ ಆರಂಭಿಸಿ, 2009ರಲ್ಲಿ ಥ್ಯಾಂಕ್ಸ್‌ಗೀವಿಂಗ್ ಡೇ ಆಚರಿಸಿಕೊಂಡಿದ್ದರು.
ನಂತರ ಚೆಲ್ಸಾರನ್ನು ಮದುವೆಯಾಗುವ ಇಂಗಿತವನ್ನು ಮಾರ್ಕ್ ವ್ಯಕ್ತಪಡಿಸಿದ್ದರು. ಕುಟುಂಬ ಮತ್ತು ಗೆಳೆಯರ ಜತೆಗೂಡಿ ಇ-ಮೇಲ್ ಮೂಲಕ ಮದುವೆ ಮಾತುಕತೆಯನ್ನು ನಡೆಸಲಾಯಿತು ಎಂದು ವರದಿಗಳು ಹೇಳಿವೆ.