ದೇಶಾದ್ಯಂತ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1500ಕ್ಕೆ ಏರಿದೆ. ಸುಮಾರು 30 ಸಾವಿರ ರಕ್ಷಣಾ ಸಿಬ್ಬಂದಿಗಳು ಪ್ರವಾಹ ಪ್ರದೇಶದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಹರಸಾಹಸ ಪಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ರಸ್ತೆ ಮತ್ತು ಮೂಲಭೂತ ಸೌಕರ್ಯಗಳು ಸಾಕಷ್ಟು ಹಾನಿಗೊಂಡಿದೆ. ಪ್ರವಾಹದಿಂದಾಗಿ ಪಾಕಿಸ್ತಾನದ ಹಲವು ಭಾಗ ತತ್ತರಿಸಿ ಹೋಗಿರುವುದಾಗಿ ಖೈಬರ್ ಪಖ್ತುನ್‌ಕ್ವಾವಾ ಪ್ರಾಂತ್ಯದ ಆಪತ್ತು ನಿರ್ವಹಣಾ ಮಂಡಳಿ ತಿಳಿಸಿದ್ದು, ಒಟ್ಟು 800 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಳೆದ ಐದು ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,500ಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಿದೆ.
ಪಂಜಾಬ್ ಪ್ರಾಂತ್ಯದಲ್ಲಿ 50 ಜನರು, ಬಲೂಚಿಸ್ತಾನ್ 19, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದಿಂದಾಗಿ ದೇಶಾದ್ಯಂತ ಒಟ್ಟು ಒಂದು ಮಿಲಿಯನ್ ಜನರು ತೊಂದರೆಗೆ ಒಳಗಾಗುವಂತಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ದೂರವಾಣಿ, ಟೆಲಿಫೋನ್, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದಾದ್ಯಂತ ಸುಮಾರು 30 ಸಾವಿರ ರಕ್ಷಣಾ ಪಡೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.