ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಕ್ಷಮೆ ಯಾಚಿಸಬೇಕು ಎಂಬ ಉಗ್ರ ಪೀಡಿತ ರಾಷ್ಟ್ರದ ಬೇಡಿಕೆಯನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಳ್ಳಿ ಹಾಕಿದ್ದಾರೆ.
ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂಬ ಟೀಕೆಯನ್ನು ಕ್ಯಾಮರೂನ್ ಹಿಂದಕ್ಕೆ ಪಡೆಯುವುದಿಲ್ಲ ಎಂಬ ಸಂಕೇತವನ್ನು ಸರಕಾರಿ ಮೂಲಗಳು ತೋರಿಸಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಅವರು ಮಾಡಿರುವ ಟೀಕೆಯ ಕುರಿತು ಕ್ಷಮೆ ಯಾಚಿಸುವುದಿಲ್ಲ. ಅವರು ತಾನು ನೀಡಿರುವ ಹೇಳಿಕೆಗೆ ಬದ್ಧರಾಗಿದ್ದಾರೆ ಎಂದು ಸರಕಾರಿ ಮೂಲವೊಂದು ತಿಳಿಸಿದೆ.
ಜುಲೈ 28ರಂದು ಭಾರತ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದರು. ಆ ದೇಶವು ಭಾರತ, ಅಫಘಾನಿಸ್ತಾನ ಮತ್ತು ಜಗತ್ತಿನ ಇತರ ರಾಷ್ಟ್ರಗಳಿಗೆ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸಿದ್ದರು.
ನಾವು ಒಂದು ಪ್ರಬಲ, ಸ್ಥಿರ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿರುವ ಪಾಕಿಸ್ತಾನವನ್ನು ನೋಡಲು ಬಯಸುತ್ತಿದ್ದೇವೆ. ಆದರೆ ಭಯೋತ್ಪಾದನೆಯನ್ನು ಭಾರತ, ಅಫಘಾನಿಸ್ತಾನ ಅಥವಾ ವಿಶ್ವದ ಯಾವುದೇ ರಾಷ್ಟ್ರಕ್ಕೆ ರಫ್ತು ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕ್ಯಾಮರೂನ್ ಎಚ್ಚರಿಕೆ ನೀಡಿದ್ದರು.
ಬ್ರಿಟೀಷ್ ಪ್ರಧಾನಿ ಖಾರ ಹೇಳಿಕೆಯ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುರಿತ ಸಭೆಯನ್ನು ಇತ್ತೀಚೆಗಷ್ಟೇ ಪಾಕಿಸ್ತಾನ ರದ್ದು ಮಾಡಿತ್ತು. ಇದರ ಬೆನ್ನಿಗೆ ಪ್ರತಿಕ್ರಿಯಿಸಿರುವ ಬ್ರಿಟೀಷ್ ಲೇಬರ್ ಪಕ್ಷದ ಸಂಸದರೊಬ್ಬರು, ಈ ಹೇಳಿಕೆಯು ಬ್ರಿಟೀಷ್ ಮುಸ್ಲಿಮರಲ್ಲಿ ಕಿಚ್ಚೆಬ್ಬಿಸಿದೆ ಎಂದಿದ್ದರು.
ಪ್ರಧಾನಿಯವರ ಈ ಹೇಳಿಕೆಯಿಂದಾಗಿ ಪಾಕಿಸ್ತಾನ ಮೂಲದ ಸಾಕಷ್ಟು ಮುಸ್ಲಿಮರು ಆಕ್ರೋಶಗೊಂಡಿದ್ದಾರೆ. ಯಾವುದೇ ಕಾರಣವಿಲ್ಲದೆ ತಮ್ಮ ಮೂಲರಾಷ್ಟ್ರವನ್ನು ಟೀಕಿಸಲಾಗಿದೆ ಎಂದು ಅವರು ಭಾವಿಸಿದ್ದಾರೆ. ಅವರು ಕೇವಲ ಭಾರತೀಯರನ್ನು ಮೆಚ್ಚಿಸುವುದಕ್ಕೋಸ್ಕರ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಲೇಬರ್ ಪಕ್ಷದ ಸಂಸದ ಖಾಲಿದ್ ಮಹಮ್ಮದ್ ಆರೋಪಿಸಿದ್ದಾರೆ.