ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂಬಂಧಪಟ್ಟ ವಿಚಾರಗಳ ಕುರಿತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜತೆ ಮುಖಾಮುಖಿ ಮಾತುಕತೆಗೆ ಸಿದ್ಧ ಎಂದು ಇರಾನ್ ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಸೋಮವಾರ ಹೇಳಿದ್ದಾರೆ.
ವಿದೇಶದಲ್ಲಿರುವ ಇರಾನ್ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ವಿಶ್ವಸಂಸ್ಥೆಯ ಮಹಾಸಭೆಗೆ ಬರುವ ಭರವಸೆಯಲ್ಲಿದ್ದೇವೆ ಎಂದು ತಿಳಿಸಿದರು. ಅಹ್ಮದಿನೇಜಾದ್ ಅವರ ಈ ಭಾಷಣ ರಾಷ್ಟ್ರದಾದ್ಯಂತ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿತ್ತು.
ನಾವು ಒಬಾಮಾ ಅವರ ಜತೆ ಮುಖಾಮುಖಿಯಾಗಲು ಕೂರಲು ಸಿದ್ಧರಿದ್ದೇವೆ. ಎದುರು ಬದುರಾಗಿ ಕುಳಿತು ಸೌಹಾರ್ದಯುತವಾಗಿ ಮಾಧ್ಯಮಗಳೆದುರು ಜಾಗತಿಕ ವಿಚಾರಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ನಾವು ಸಿದ್ಧ ಎಂದರು.
ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಅಹ್ಮದಿನೇಜಾದ್ ಭಾಗವಹಿಸುವ ಸಾಧ್ಯತೆಗಳಿವೆ.
ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಮಧ್ಯಪ್ರಾಚ್ಯದ ಕನಿಷ್ಠ ಮೂರು ರಾಷ್ಟ್ರಗಳ ಮೇಲೆ ಅಮೆರಿಕಾ ಮಿಲಿಟರಿ ದಾಳಿಗಳನ್ನು ನಡೆಸಲಿದೆ ಎಂದು ಇರಾನ್ ನಿರೀಕ್ಷಿಸುತ್ತಿದೆ ಎಂದು ಅಧ್ಯಕ್ಷರು ಇತ್ತೀಚೆಗಷ್ಟೇ ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.