ಮಿತಿಗಿಂತ ಮೂರು ಪಟ್ಟು ಅಧಿಕ ಮದ್ಯ ಸೇವಿಸಿದ್ದ ಭಾರತೀಯ ಮೂಲದ ಚಾಲಕನೊಬ್ಬ ತಾನು ಚಲಾಯಿಸುತ್ತಿದ್ದ ಶಾಲಾ ಬಸ್ಸನ್ನು ಸೇತುವೆಯೊದಕ್ಕೆ ಢಿಕ್ಕಿ ಹೊಡೆಸಿದ್ದಾನೆ ಎಂದು ವರದಿಯಾಗಿದೆ.
ಬಕ್ಕಿಂಗ್‌ಹ್ಯಾಮ್‌ಶೈರ್‌ನ ಚಾಲ್ಫಾಂಟ್ಸ್ ಕಮ್ಯುನಿಟಿ ಕಾಲೇಜಿನಿಂದ 46 ವಿದ್ಯಾರ್ಥಿಗಳನ್ನು ಮನೆಗಳಿಗೆ ಬಿಟ್ಟ ನಂತರ ಮಿಡ್ಲ್‌ಸೆಕ್ಸ್‌ನಲ್ಲಿನ 49ರ ಹರೆಯ ಗುರ್ದೀಪ್ ಸಿಂಗ್ ಸಾಗೂ ಎಂಬ ಚಾಲಕ ಡಬ್ಬಲ್ ಡೆಕ್ಕರ್ ಬಸ್ಸನ್ನು ಮೇಲ್ಸೇತುವೆಯೊಂದರ ಬುಡಕ್ಕೆ ಢಿಕ್ಕಿ ಹೊಡೆಸಿದ್ದ.
ಇದರಿಂದ ಬಸ್ಸಿನ ಗಾಜು ಮತ್ತು ಹೊರಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಅಲ್ಲದೆ ಬಸ್ಸಿನ ಮೇಲ್ಭಾಗವು ಢಿಕ್ಕಿ ಹೊಡೆದ ರಭಸಕ್ಕೆ ಹಾರಿ ಹೋಗಿತ್ತು ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಲಾಗಿದೆ.
ಬಸ್ಸಿನಲ್ಲಿ ಮಕ್ಕಳು ಇರದೇ ಇದ್ದುದರಿಂದ ಘಟನೆಯಿಂದ ಯಾರೊಬ್ಬರೂ ಗಾಯಗೊಂಡಿರಲಿಲ್ಲ. ಆದರೆ ಚಾಲಕ ಗುರ್ದೀಪ್, ವಾಹನ ಚಾಲನೆ ಮಾಡುವಾಗ ಅನುಮತಿ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚು ಮದ್ಯ ಸೇವನೆ ಮಾಡಿದ್ದ, ಹಿಂದಿನ ರಾತ್ರಿಯಿಡೀ ಆತ ತನ್ನ ಗೆಳೆಯರ ಜತೆ ಪಾರ್ಟಿ ಮಾಡಿದ್ದ ಎಂದು ಕೋರ್ಟ್‌ಗೆ ವಿವರಣೆ ನೀಡಲಾಗಿದೆ.
ಆತ ಚಲಾಯಿಸುತ್ತಿದ್ದ ಬಸ್ 15 ಅಡಿ ಎತ್ತರವಿತ್ತು. ಆದರೆ ಮುಂದೆ ಇರುವ ಸೇತುವೆಯ ಅಡಿ ಭಾಗದಲ್ಲಿ ಈ ಬಸ್ಸು ನುಸುಳಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಈ ಸೇತುವೆ 13 ಅಡಿ ಮಾತ್ರ ಎತ್ತರವಿದೆ ಎಂಬ ಫಲಕವನ್ನು ಕೂಡ ಆತ ನಿರ್ಲಕ್ಷಿಸಿದ್ದ.
ಆರೋಪಿಯನ್ನು ನಂತರ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಚಾಲಕ, ತಾನು ಡಬ್ಬಲ್ ಡೆಕ್ಕರ್ ಬಸ್ ಚಾಲನೆ ಮಾಡುತ್ತಿದ್ದೇನೆ ಎಂಬ ಅರಿವಿರಲಿಲ್ಲ ಎಂದು ತಿಳಿಸಿದ್ದ.