ಪನಾಮಾ ಮೂಲದ ಹಡಗೊಂದನ್ನು ಸೋಮಾಲಿ ಕಡಲ್ಗಳ್ಳರು ಸೋಮವಾರ ಗಲ್ಫ್ ಆಫ್ ಏಡನ್‌ನಲ್ಲಿ ಅಪಹರಿಸಿದ್ದು, ಹಡಗಿನಲ್ಲಿ ಭಾರತೀಯರು ಸೇರಿದಂತೆ 23 ಮಂದಿ ಸಿಬ್ಬಂದಿಗಳಿರುವುದಾಗಿ ಯುರೋಪ್ ಒಕ್ಕೂಟದ ನೌಕಾ ಪಡೆ ಮೂಲಗಳು ತಿಳಿಸಿವೆ.
ಎಂವಿ ಸೂಯೆಜ್ ಹೆಸರಿನ ಹಡಗಿನ ಮೇಲೆ ಇಂದು ಬೆಳಿಗ್ಗೆ ಸೋಮಾಲಿ ಕಡಲ್ಗಳ್ಳರು ದಾಳಿ ನಡೆಸಿರುವುದಾಗಿ ನೌಕಾ ಪಡೆ ವಕ್ತಾರ ಜಾನ್ ಹಾರ್ಬರ್ ಹೇಳಿದ್ದಾರೆ.
17,300 ಟನ್ಸ್ ಭಾರದ ಎಂವಿ ಸೂಯೆಜ್ ಹಡಗಿನಲ್ಲಿ ಈಜಿಪ್ಟ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭಾರತ ಸೇರಿದಂತೆ ಒಟ್ಟು 23 ಮಂದಿ ಸಿಬ್ಬಂದಿಗಳಿದ್ದಾರೆ. ಪನಾಮಾ ಮೂಲದ ಉದ್ಯಮಿಯ ಈ ಕಾರ್ಗೋ ಹಡಗಿನಲ್ಲಿ ಸಿಮೆಂಟ್ ಸಾಗಿಸಲಾಗುತ್ತಿತ್ತು ಎಂದು ಹಾರ್ಬರ್ ವಿವರಿಸಿರುವುದಾಗಿ ಕ್ಸಿನ್‌ಹುವಾ ವರದಿ ತಿಳಿಸಿದೆ.
ಹಡಗಿನ ಮೇಲೆ ಏಕಾಏಕಿ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದ ನಂತರ, ಹಡಗನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಹಾರ್ಬರ್ ವಿವರಿಸಿದ್ದಾರೆ. ಆಫ್ರಿಕಾದ ಕರಾವಳಿ ಪ್ರದೇಶದ ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದೆ. ಈಗಾಗಲೇ ಗಲ್ಫ್ ಆಫ್ ಏಡನ್‌ನಲ್ಲಿ ಸೋಮಾಲಿ ಕಡಲ್ಗಳ್ಳರು ಸಾಕಷ್ಟು ಹಡಗುಗಳನ್ನು ಅಪಹರಿಸಿ, ಒತ್ತೆ ಹಣ ಪಡೆದಿದ್ದರು.