ಗೆಳೆಯನ ಅಂತ್ಯಸಂಸ್ಕಾರದ ಪ್ರಾರ್ಥನೆಗಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಆಡಳಿತಾರೂಢ ಮುತೈದಾ ಖ್ವಾಮಿ ಮೂವ್‌ಮೆಂಟ್ ಶಾಸಕ ಹಾಗೂ ಅವರ ಅಂಗರಕ್ಷಕನನ್ನು ಹತ್ಯೆಗೈದ ಪರಿಣಾಮವಾಗಿ ಹಿಂಸಾಚಾರ ಭುಗಿಲೆದ್ದು ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 70ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಶಾಸಕ ರೆಜಾ ಹೈದರ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದಾಗಿ ಪೊಲೀಸ್ ಮತ್ತು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಹೈದರ್ ಹತ್ಯೆಯ ಘಟನೆಯಿಂದ ಕೆರಳಿದ ಬೆಂಬಲಿಗರು ಗಲಭೆ ನಡೆಸಿದ ಪರಿಣಾಮ ಕರಾಚಿ ಮತ್ತು ಹೈದರಾಬಾದ್ ಭಾಗದಲ್ಲಿ ಸುಮಾರು 30 ಜನರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 13 ಜನರ ಶವವನ್ನು ಗುರುತಿಸಿದ್ದು, ಗಾಯಗೊಂಡ 45 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಡಿಕೋ ಲೀಗಲ್ ಅಧಿಕಾರಿ ತಿಳಿಸಿದ್ದಾರೆ.
ಕರಾಚಿಯಾದ್ಯಂತ ಉದ್ನಿಗ್ನ ಸ್ಥಿತಿ ಇದ್ದು, ನಗರದಾದ್ಯಂತ ಪೊಲೀಸ್ ಮತ್ತು ಅರೆಸೇನಾ ಪಡೆ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಾಸೀಮ್ ವಿವರಿಸಿದ್ದಾರೆ. ಸಿಂಧ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿರುವ ರೆಜಾ ಹೈದರ್ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಅವರ ಅಂಗರಕ್ಷಕ ಖಾಲಿದ್ ಖಾನ್ ಕೂಡ ಸಾವನ್ನಪ್ಪಿದ್ದಾರೆ.
ತನ್ನ ಗೆಳೆಯನ ಅಂತ್ಯಸಂಸ್ಕಾರದ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರೆಜಾ ಅವರನ್ನು ಮಸೀದಿ ಸಮೀಪ ಮೋಟಾರ್ ಬೈಕ್ ಹಾಗೂ ಬಿಳಿ ಕಾರಿನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.